ಮಾಧ್ಯಮಕ್ಕೆ ಸಂದರ್ಶನ: ಹೈದರಾಬಾದ್ ವಿವಿ ಪ್ರೊಫೆಸರ್, ಇಬ್ಬರು ಕುಕಿ ಕಾರ್ಯಕರ್ತರಿಗೆ ಇಂಫಾಲ ನ್ಯಾಯಾಲಯದ ಸಮನ್ಸ್

Update: 2023-07-09 13:53 GMT

Photo: thewire.in

ಹೊಸದಿಲ್ಲಿ: ಹೈದರಾಬಾದ್ ವಿವಿಯ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಖಾಮ್ ಖಾನ್ ಸುವಾನ್ ಹಾಸಿಂಗ್ ಮತ್ತು ಇಬ್ಬರು ಕುಕಿ ಕಾರ್ಯಕರ್ತರು The Wire ಸುದ್ದಿ ಜಾಲತಾಣಕ್ಕೆ ಇತ್ತೀಚಿಗೆ ನೀಡಿದ್ದ ಸಂದರ್ಶನಗಳಲ್ಲಿ ನೀಡಿದ್ದ ಹೇಳಿಕೆಗಳು ಕೋಮು ಭಾವನೆಗಳನ್ನು ಕೆರಳಿಸಿದ್ದವು ಎಂದು ಆರೋಪಿಸಿ ಮೈತೆಯಿ ಕಾರ್ಯಕರ್ತರು ದಾಖಲಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಣಿಪುರದ ಇಂಫಾಲ ಪೂರ್ವ ಜಿಲ್ಲಾ ನ್ಯಾಯಾಲಯವು ಈ ಮೂವರಿಗೂ ಸಮನ್ಸ್ ಹೊರಡಿಸಿದೆ.

ಮಣಿಪುರ ಬಿಕ್ಕಟ್ಟಿನ ಕುರಿತು ಸರಣಿ ಕಾರ್ಯಕ್ರಮಗಳ ಭಾಗವಾಗಿ ಕರಣ್ ಥಾಪರ್ ಅವರು ಪ್ರೊ.ಹಾಸಿಂಗ್, ಕುಕಿ ವಿಮೆನ್ಸ್ ಫೋರಮ್ನ ಸಂಚಾಲಕಿ ಮೇರಿ ಗ್ರೇಸ್ ಝೌ ಮತ್ತು ಬಿಜೆಪಿ ಪರ ಕುಕಿ ಪೀಪಲ್ಸ್ ಅಲೈಯನ್ಸ್ ನ ಪ್ರಧಾನ ಕಾರ್ಯದರ್ಶಿ ವಿಲ್ಸನ್ ಲಾಲಮ್ ಹ್ಯಾಂಗ್ಶಿಂಗ್ ಅವರನ್ನು ಸಂದರ್ಶಿಸಿದ್ದರು. The Wire ಮೇ 2023ರಿಂದ ಈ ಸಂದರ್ಶನಗಳನ್ನು ಪ್ರಕಟಿಸಿತ್ತು.

ಮೈತೆಯಿ ಬುಡಕಟ್ಟು ಒಕ್ಕೂಟ (ಎಂಟಿಯು)ದ ಸದಸ್ಯ ಮಣಿಹರ ಮೊಯಿರಾಂಗ್ಥೆಮ್ ಸಿಂಗ್ ಅವರು ಪ್ರೊ.ಹಾಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮಣಿಪುರ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದ ಎಂಟಿಯು ರಾಜ್ಯದಲ್ಲಿಯ ಬಹುಸಂಖ್ಯಾಕ ಮೈತೆಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದ ನ್ಯಾಯಾಲಯದ ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಆದೇಶವು ಅಂತಿಮವಾಗಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣವಾಗಿದ್ದು, ಕನಿಷ್ಠ 150 ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 40,000 ಕ್ಕೂ ಅಧಿಕ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಜೂ.17ರಂದು ನೀಡಿದ್ದ ತನ್ನ ಸಂದರ್ಶನದಲ್ಲಿ ಪ್ರೊ.ಹಾಸಿಂಗ್ ಅವರು,ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ಸಮಸ್ಯೆಗಳನ್ನು ಬಗೆಹರಿಸಲು ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯಕ್ಕಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಹೇಳಿದ್ದರು.

ಪ್ರೊ.ಹಾಸಿಂಗ್ ಅವರು ಮೈತೆಯಿ ಸಮುದಾಯದೊಂದಿಗೆ ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಪವಿತ್ರ ಧಾರ್ಮಿಕ ಸ್ಥಳಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಮೈತೆಯಿಗಳ ಹೆಸರು ಕೆಡಿಸಲು ಪ್ರಯತ್ನಿಸಿದ್ದರು ಎಂದು ಮಣಿಹರ ಸಿಂಗ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ನೋಟಿಸಿಗೆ ಜು.28ರೊಳಗೆ ಉತ್ತರಿಸುವಂತೆ ಇಂಫಾಲ ಪೂರ್ವ ಜಿಲ್ಲಾ ನ್ಯಾಯಾಲಯವು ಪ್ರೊ.ಹಾಸಿಂಗ್ ಅವರಿಗೆ ಸೂಚಿಸಿದೆ.

ಹೈದರಾಬಾದ್ ವಿವಿಯ ರಾಜಕೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಘಟನೆ 'ಕಮ್ಯುನಿಟಾಸ್ ' ಪ್ರೊ.ಹಾಸಿಂಗ್ ವಿರುದ್ಧ ನ್ಯಾಯಾಲಯದ ಕ್ರಮಗಳನ್ನು ಹೇಳಿಕೆಯೊಂದರಲ್ಲಿ ಖಂಡಿಸಿದೆ. ಈ ಕ್ರಮಗಳು ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಸುರಕ್ಷತೆಗೆ ಬೆದರಿಕೆಯನ್ನು ಒಡ್ಡಿವೆ ಎಂದು ಅದು ಹೇಳಿದೆ.

ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಲೌರೆಮ್ಬಾಮ್ ಚಾ ಸೊಮೆರೆಂಡ್ರೊ ಕುಕಿ ಕಾರ್ಯಕರ್ತರಾದ ಝೌ ಮತ್ತು ಹ್ಯಾಂಗ್ಶಿಂಗ್ ವಿರುದ್ಧ ಇಂತಹುದೇ ಆರೋಪಗಳನ್ನು ಮಾಡಿದ್ದಾರೆ.

ಜೂ.14ರಂದು ಕರಣ ಥಾಪರ್ಗೆ ನೀಡಿದ್ದ ಸಂದರ್ಶನದಲ್ಲಿ ಹಿಂಸಾಚಾರದಿಂದಾಗಿ ಕುಕಿ ಸಮುದಾಯವು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಮಾತನಾಡಿದ್ದ ಝೌ,ಬೀರೇನ್ ಸಿಂಗ್ ರಾಜೀನಾಮೆ ಮತ್ತು ಕುಕಿ ಸಮುದಾಯಕ್ಕೆ ಪ್ರತ್ಯೇಕ ಆಡಳಿತಕ್ಕಾಗಿ ಕರೆಯನ್ನು ಬೆಂಬಲಿಸಿದ್ದರು.

ಮೇ 26ರಂದು ನೀಡಿದ್ದ ತನ್ನ ಸಂದರ್ಶನದಲ್ಲಿ ಹ್ಯಾಂಗ್ಶಿಂಗ್ ಗುಂಪು ಶಾಸಕರೋರ್ವರ ಮನೆಯನ್ನು ಸುಟ್ಟು ಹಾಕಲು ಬೀರೇನ್ ಸಿಂಗ್ ಅವಕಾಶ ನೀಡಿದ್ದರು ಎಂದು ಆರೋಪಿಸಿದ್ದರು. ಪ್ರತ್ಯೇಕ ಆಡಳಿತ ವ್ಯವಸ್ಥೆಗಾಗಿ ಕುಕಿಗಳು ಹೋರಾಡಲಿದ್ದಾರೆ ಎಂದೂ ಅವರು ಹೇಳಿದ್ದರು.

ಝೌ ಮತ್ತು ಹ್ಯಾಂಗ್ಶಿಂಗ್ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಮೈತೆಯಿ ಗುಂಪುಗಳು ಆರಂಭಿಸಿದ್ದವು ಮತ್ತು ಹಿಂಸಾಚಾರದಲ್ಲಿ ಬೀರೇನ್ ಸಿಂಗ್ ಶಾಮೀಲಾಗಿದ್ದಾರೆ ಎಂದು ಸುಳ್ಳು ದೂಷಣೆಗಳನ್ನು ಮಾಡಿದ್ದರು ಎಂದು ಸೊಮೆರೆಂಡ್ರೊ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ನ್ಯಾಯಾಲಯವು ಜು.24ರಂದು ತನ್ನ ಮುಂದೆ ಹಾಜರಾಗುವಂತೆ ಝೌ ಮತ್ತು ಹ್ಯಾಂಗ್ಶಿಂಗ್ ಅವರಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News