ಕೇವಲ 70 ಸಾವಿರಕ್ಕೆ ವೈದ್ಯಕೀಯ ಪದವಿ: 14 ನಕಲಿ ವೈದ್ಯರ ಬಂಧನ

Update: 2024-12-06 02:34 GMT

PC: x.com/ndtv

ಅಹ್ಮದಾಬಾದ್: ಕೇವಲ ಎಂಟನೇ ತರಗತಿ ಕಲಿತ ವಿದ್ಯಾರ್ಥಿಗೆ ಕೇವಲ 70 ಸಾವಿರ ರೂಪಾಯಿ ಶುಲ್ಕ ವಿಧಿಸಿ ವೈದ್ಯಕೀಯ ಪದವಿ ನೀಡುವ ಜಾಲವನ್ನು ಪತ್ತೆ ಮಾಡಿರುವ ಗುಜರಾತ್ ಪೊಲೀಸರು, ನಕಲಿ ವೈದ್ಯಕೀಯ ಪದವಿ ಖರೀದಿಸಿದ 14 ಮಂದಿ ನಕಲಿ ವೈದ್ಯರನ್ನು ಬಂಧಿಸಿದ್ದಾರೆ. ಗುಜರಾತ್ ನ ಸೂರತ್ ಮೂಲದ ಈ ಜಾಲ 1200 ಮಂದಿ ನಕಲಿ ಪದವಿಯ ಅಂಕಿ ಅಂಶಗಳನ್ನು ಹೊಂದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಡಾ.ರಮೇಶ್ ಗುಜರಾತಿ ಎಂಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ನ ಎಲೆಕ್ಟ್ರೋ ಹೋಮಿಯೋಪಥಿಕ್ ಮೆಡಿಸಿನ್ ಇಲಾಖೆ ನೀಡುವ ವೈದ್ಯಕೀಯ ಪದವಿಯನ್ನು ಈ ಜಾಲ ನೀಡುತ್ತಿತ್ತು. ಹಲವಾರು ಅರ್ಜಿಗಳು, ಪ್ರಮಾಣಪತ್ರಗಳು ಮತ್ತು ಸ್ಟ್ಯಾಂಪ್ ಗಳನ್ನು ಕೂಡಾ ವಶಪಡಿಸಿಕೊಂಡಿದೆ.

ಮೂವರು ವ್ಯಕ್ತಿಗಳು ನಕಲಿ ವೈದ್ಯಕೀಯ ಪದವಿ ಹೊಂದಿ ಅಲೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ. ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಂಥ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದರು. ಅವರ ವಿಚಾರಣೆ ನಡೆಸಿದಾಗ ಈ ನಕಲಿ ವೈದ್ಯರು ಬಿಇಎಚ್ಎಂ ಇಲಾಖೆ ನೀಡಿದ ಪದವಿ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಆದರೆ ಗುಜರಾತ್ ಸರ್ಕಾರ ಇಂಥ ಯಾವುದೇ ಪ್ರಮಾಣಪತ್ರವನ್ನು ನೀಡುತ್ತಿಲ್ಲ ಎನ್ನುವುದನ್ನು ಗಮನಿಸಿದ ಅಧಿಕಾರಿಗಳು, ಇದು ನಕಲಿ ಎಂಬ ನಿರ್ಧಾರಕ್ಕೆ ಬಂದರು.

ನಕಲಿ ವೆಬ್‌ಸೈಟ್‌ನಲ್ಲಿ ಆರೋಪಿಗಳು ಪದವಿಗಳನ್ನು ನೋಂದಾಯಿಸುತ್ತಿದ್ದರು. ಭಾರತದಲ್ಲಿ ಎಲೆಕ್ಟ್ರೋ ಹೋಮಿಯೋಪಥಿಯನ್ನು ನಿರ್ಬಂಧಿಸುವ ಯಾವುದೇ ನಿಯಮಾವಳಿಗಳು ಇಲ್ಲ ಎನ್ನುವುದನ್ನು ತಿಳಿದುಕೊಂಡ ಆರೋಪಿಗಳು ಈ ಪದವಿಗಳನ್ನು ನೀಡುವ ಮಂಡಳಿಯನ್ನು ರಚಿಸಿಕೊಂಡಿದ್ದರು. ಐದು ಮಂದಿಯನ್ನು ನಿಯೋಜಿಸಿಕೊಂಡು, ಎಲೆಕ್ಟ್ರೋ ಹೋಮಿಯೋಪಥಿ ತರಬೇತಿ ನೀಡಿದ್ದರು. ಮೂರು ವರ್ಷದ ಒಳಗಾಗಿ ಅವರಿಗೆ ಪದವಿ ನೀಡಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಬಳಿಕ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡು ಗುಜರಾತ್ ಆಯುಷ್ ಸಚಿವಾಲಯದ ವತಿಯಿಂದ ಪದವಿ ನೀಡಲಾಗುವುದು ಎಂದು ಆರೋಪಿಗಳು ಪ್ರಚಾರ ಮಾಡಿ ಈ ನಕಲಿ ಪದವಿ ನೀಡುತ್ತಿದ್ದರು. ಈ ಪ್ರಮಾಣಪತ್ರಕ್ಕೆ 70 ಸಾವಿರ ಶುಲ್ಕ ವಿಧಿಸಿ, ಅಲೋಪಥಿ, ಹೋಮಿಯೋಪಥಿ ಮತ್ತು ಆರೋಗ್ಯ ವೈದ್ಯಪದ್ಧತಿಯಲ್ಲಿ ಔಷಧಿ ನೀಡಲು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News