ವಲಸೆ ಕಾರ್ಮಿಕರು ಕಾಶ್ಮೀರ ಕಣಿವೆ ತೊರೆಯುವಂತೆ ಸ್ಥಳೀಯಾಡಳಿತ ಒತ್ತಡ ಹೇರುತ್ತಿದೆ : ಮೆಹಬೂಬಾ ಮುಫ್ತಿ ಆರೋಪ

Update: 2024-10-22 15:09 GMT

 ಮೆಹಬೂಬಾ ಮುಫ್ತಿ | PC : PTI  

ಶ್ರೀನಗರ : ಜಮ್ಮುಕಾಶ್ಮೀರದ ಗಂದೆರ್‌ಬಾಲ್ ಜಿಲ್ಲೆಯಲ್ಲಿ ರವಿವಾರ ಐವರು ವಲಸೆ ಕಾರ್ಮಿಕರು ಸೇರಿದಂತೆ ಏಳು ಮಂದಿ ಉಗ್ರರ ದಾಳಿಗೆ ಬಲಿಯಾದ ಘಟನೆಯ ಬಳಿಕ ಸ್ಥಳೀಯರಲ್ಲದ ಕಾರ್ಮಿಕರು ಕಾಶ್ಮೀರ ಕಣಿವೆಯನ್ನು ತೊರೆದುಹೋಗುವಂತೆ ಸ್ಥಳೀಯಾಡಳಿತವು ಒತ್ತಡವನ್ನು ಹೇರುತ್ತಿದೆಯೆಂಬ ವರದಿಗಳು ಬರುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ, ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಂಗಳವಾರ ಆಪಾದಿಸಿದ್ದಾರೆ.

ಆದರೆ ಪೊಲೀಸರು ಈ ವರದಿಗಳು ಸಂಪೂರ್ಣ ಆಧಾರರಹಿತವೆಂದು ಪೊಲೀಸರು ತಳ್ಳಿಹಾಕಿದ್ದಾರೆ. ‘‘ಸೋನಾಮಾರ್ಗ್ ಬಳಿ ನಡೆದ ಬರ್ಬರ ದಾಳಿಯ ಬಳಿಕ ತಕ್ಷಣವೇ ಕಣಿವೆಯನ್ನು ತೊರೆಯುವಂತೆ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಸ್ಥಳೀಯಾಡಳಿತವು ಒತ್ತಡ ಹೇರುತ್ತಿದೆ’’ ಎಂದು ಮೆಹಬೂಬಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ಅವರು (ಹೊರಗಿನ ಕಾರ್ಮಿಕರು) ಭಯಗ್ರಸ್ತರಾಗಿದ್ದಾರೆಂದು ನನಗೆ ಅರ್ಥವಾಗುತ್ತದೆ. ಆದರೆ ಅವರು ಕಣಿವೆಯನ್ನು ತೊರೆದುಹೋಗುವಂತೆ ಹೇಳುವುದು ಸಮಸ್ಯೆಗೆ ಪರಿಹಾರವಲ್ಲ. ಇದು ಇನ್ನಷ್ಟು ತೊಂದರೆಗಳನ್ನು ಸೃಷ್ಟಿಸುತ್ತದೆ ಹಾಗೂ ದೇಶಕ್ಕೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಜಮ್ಮುಕಾಶ್ಮೀರವು ಇತ್ತೀಚೆಗೆ ಶಾಂತಿಯುತವಾದ ಹಾಗೂ ಭಯೋತ್ಪಾದನೆ ಮುಕ್ತವಾದ ಚುನಾವಣೆಗೆ ಸಾಕ್ಷಿಯಾಗಿತ್ತು. ಆದರೆ ಇಂತಹ ಪೂರ್ವಾಗ್ರಹ ಪೀಡಿತ ಕ್ರಮವು ಬೇರೆಯೇ ಆರ್ಥವನ್ನು ನೀಡುತ್ತದೆ’’ ಎಂದವರು ಹೇಳಿದ್ದಾರೆ.

ಇಂತಹ ಕ್ರಮಗಳು ಇತರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವ ಹಾಗೂ ಶಿಕ್ಷಣ ಪಡೆಯುತ್ತಿರುವ ಕಾಶ್ಮೀರಿಗಳ ವಿರುದ್ಧ ಆಕ್ರೋಶವನ್ನು ಸೃಷ್ಟಿಸುವ ಸಾಧ್ಯತೆಯಿದೆ. ಆದುದರಿಂದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರು ಕ್ರಮಕೈಗೊಳ್ಳಬೇಕು ಎಂದು ಮೆಹಬೂಬಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಮೆಹಬೂಬ ಮುಫ್ತಿ ಅವರ ಆರೋಪವನ್ನು ಗಂದೇರ್‌ಬಾಲ್ ಪೊಲೀಸರು ನಿರಾಕರಿಸಿದ್ದಾರೆ. ‘‘ ಸುರಕ್ಷತೆಯ ಪಾಲನೆ ಹಾಗೂ ಜೀವನೋಪಾಯಕ್ಕಾಗಿ ದುಡಿಯಲು ಬಯಸುವವರಿಗೆ ಸುರಕ್ಷತೆಯ ಭಾವನೆಯನ್ನು ಮೂಡಿಸಲು ಜಮ್ಮುಕಾಶ್ಮೀರ ಪೊಲೀಸರು ಬದ್ಧರಾಗಿದ್ದಾರೆ’’ ಎಂದು ಗಂದೇರ್‌ಬಾಲ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಎಪಿಸಿಓ ಇನ್‌ಫ್ರಾಟೆಕ್‌ಕಂಪೆನಿಯ ಓರ್ವ ವೈದ್ಯ ಹಾಗೂ ಎಂಜಿನಿಯರ್ ಸೇರಿದಂತೆ ಏಳು ಮಂದಿಯನ್ನು ಶಂಕಿತ ಉಗ್ರರು ರವಿವಾರ ಗಂದೇರ್‌ಬಾಲ್‌ನಲ್ಲಿ ಹತ್ಯೆಗೈದಿದ್ದರು. ಮೃತಪಟ್ಟ ಹೊರರಾಜ್ಯಗಳ ಕಾರ್ಮಿಕರಲ್ಲಿ ಮೂವರು ಬಿಹಾರದವರು ಹಾಗೂ ತಲಾ ಒಬ್ಬರು ಪಂಜಾಬ್ ಮತ್ತು ಮಧ್ಯಪ್ರದೇಶದವರೆಂದು ತಿಳಿದುಬಂದಿದೆ.

ಎಪಿಸಿಓ ಇನ್‌ಫ್ರಾಟೆಕ್ ಗಂದೇರ್‌ಬಾಲ್ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ 6.5 ಕಿ.ಮೀ. ವಿಸ್ತೀರ್ಣದ ಝಡ್-ಮೊರ್ಹ್‌ ಸುರಂಗ ಮಾರ್ಗದ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News