ಪಿಡಿಪಿ ಪಕ್ಷದ ಘಟಕವನ್ನು ವಿಸರ್ಜಿಸಿದ ಮೆಹಬೂಬ ಮುಫ್ತಿ
Update: 2024-10-26 05:44 GMT
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ)ಯ ಅಧ್ಯಕ್ಷೆ ಮೆಹಬೂಬ ಮುಫ್ತಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಘಟಕವನ್ನು ಶನಿವಾರ ವಿಸರ್ಜಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚಿಸಿದ ನಂತರ, ಪಕ್ಷದ ನೂತನ ಪದಾಧಿಕಾರಿಗಳು, ವಿವಿಧ ಘಟಕಗಳು ಹಾಗೂ ಸಂಸ್ಥೆಗಳನ್ನು ಪುನರ್ ರಚಿಸಲಾಗುವುದು ಎಂದು ಪಿಡಿಪಿ ತಿಳಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ದಯನೀಯ ಪ್ರದರ್ಶನ ತೋರಿ, ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಪಿಡಿಪಿಯ ಸಾಧನೆ ಕುರಿತು ಗುರುವಾರ ನಡೆದ ಪರಾಮರ್ಶೆ ಸಭೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ನಡೆದ ಪಕ್ಷದ ಹಿರಿಯ ನಾಯಕರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಭೆಯಲ್ಲಿ ಈ ಪರಾಮರ್ಶೆ ನಡೆಸಲಾಯಿತು ಎಂದು ವರದಿಯಾಗಿದೆ.