‘ಮೇರಾ ಬಿಲ್, ಮೇರಾ ಅಧಿಕಾರ’ ಯೋಜನೆಗೆ ಸೆ.1ರಂದು ಚಾಲನೆ
ಹೊಸದಿಲ್ಲಿ: ಕೇಂದ್ರ ಸರಕಾರವು 10,000 ರೂ.ಗಳಿಂದ ಒಂದು ಕೋಟಿ ರೂ.ವರೆಗೆ ನಗದು ಬಹುಮಾನಗಳನ್ನು ನೀಡುವ‘ಮೇರಾ ಬಿಲ್ ಮೇರಾ ಅಧಿಕಾರ’ ಇನ್ವಾಯ್ಸ್ ಪ್ರೋತ್ಸಾಹಕ ಯೋಜನೆಗೆ ಸೆ.1ರಂದು ಚಾಲನೆ ನೀಡಲಿದೆ. ತಾವು ಪ್ರತಿ ಬಾರಿ ಖರೀದಿಯನ್ನು ಮಾಡಿದಾಗ ಬಿಲ್ ಅನ್ನು ಕೇಳಿ ಪಡೆಯುವಂತೆ ಗ್ರಾಹಕರನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿರುವ ಯೋಜನೆಯು ಆರಂಭದಲ್ಲಿ ಅಸ್ಸಾಂ, ಗುಜರಾತ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಹಾಗೂ ಪುದುಚೇರಿ, ದಮನ್ ಮತ್ತು ದಿಯು ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳ್ಳಲಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ)ಯು ತಿಳಿಸಿದೆ.
ಜಿಎಸ್‌ಟಿ ಇನ್ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಿದರೆ ನಗದು ಬಹುಮಾನಗಳನ್ನು ಗೆಲ್ಲಲು ಇನ್ವಾಯ್ಸ್ ಉತ್ತೇಜಕ ಯೋಜನೆಯು ಅವಕಾಶ ಕಲ್ಪಿಸುತ್ತದೆ ಎಂದು ಸಿಬಿಐಸಿ ಟ್ವೀಟಿಸಿದೆ.
ಜಿಎಸ್‌ಟಿ ನೋಂದಾಯಿತ ಪೂರೈಕೆದಾರರು ಗ್ರಾಹಕರಿಗೆ ನೀಡುವ ಎಲ್ಲ ಇನ್ವಾಯ್ಸ್‌ಗಳು ‘ಮೇರಾ ಬಿಲ್ ಮೇರಾ ಅಧಿಕಾರ ’ಯೋಜನೆಗೆ ಅರ್ಹವಾಗಿರುತ್ತವೆ. ಯೋಜನೆಯಡಿ ಮಾಸಿಕ ಮತ್ತು ತ್ರೈಮಾಸಿಕ ಅದೃಷ್ಟ ಡ್ರಾಗಳನ್ನು ನಡೆಸಲಾಗುವುದು ಮತ್ತು ವಿಜೇತರು 10,000 ರೂ.ಗಳಿಂದ ಒಂದು ಕೋ.ರೂ.ವರೆಗೆ ಬಹುಮಾನಗಳಿಗೆ ಅರ್ಹರಾಗಿರುತ್ತಾರೆ.
ಕನಿಷ್ಠ 200 ರೂ.ಖರೀದಿ ಮೌಲ್ಯದ ಇನ್ವಾಯ್ಸ್‌ಗಳನ್ನು ಡ್ರಾಗೆ ಪರಿಗಣಿಸಲಾಗುವುದು ಮತ್ತು ಓರ್ವ ವ್ಯಕ್ತಿ ಸೆ.1ರಿಂದ ಆರಂಭಿಸಿ ಮಾಸಿಕ ಗರಿಷ್ಠ 25 ಇನ್ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಬಹುದು. ‘ಮೇರಾ ಬಿಲ್ ಮೇರಾ ಅಧಿಕಾರ ’ಮೊಬೈಲ್ ಆ್ಯಪ್ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾದ ಇನ್ವಾಯ್ಸ್ ಮಾರಾಟಗಾರನ ಜಿಎಸ್‌ಟಿಐಎನ್,ಇನ್ವಾಯ್ಸ್ ಸಂಖ್ಯೆ,ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಒಳಗೊಂಡಿರಬೇಕು.
ಸರಕುಗಳು ಅಥವಾ ಸೇವೆಗಳ ಖರೀದಿ ಸಂದರ್ಭದಲ್ಲಿ ಮಾರಾಟಗಾರನಿಂದ ಅಸಲಿ ಇನ್ವಾಯ್ಸ್‌ಗಳನ್ನು ಕೇಳುವಂತೆ ಗ್ರಾಹಕರನ್ನು ಉತ್ತೇಜಿಸುವುದು ಯೋಜನೆಯ ಪರಿಕಲ್ಪನೆಯಾಗಿದೆ.