ಮಿಝೋರಾಂ: ಇಂಗ್ಲೀಷ್ ಕಲಿಯಲು 9 ನೇ ತರಗತಿಗೆ ದಾಖಲಾದ 78 ವರ್ಷದ ವ್ಯಕ್ತಿ!

Update: 2023-08-03 08:19 GMT

ಐಝ್ವಾಲ್: ಪೂರ್ವ ಮಿಝೋರಾಂನ 78 ವರ್ಷದ ವ್ಯಕ್ತಿಯೊಬ್ಬರಿಗೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ವಯಸ್ಸು ಅಡ್ಡಿಯಾದಂತಿಲ್ಲ. ಅವರು ಶಾಲಾ ಸಮವಸ್ತ್ರವನ್ನು ಧರಿಸಿ ಹಾಗೂ ಪುಸ್ತಕಗಳಿಂದ ತುಂಬಿದ ಚೀಲವನ್ನು ಹಾಕಿಕೊಂಡು ಶಾಲೆ ತಲುಪಲು ಪ್ರತಿದಿನ 3 ಕಿಲೋಮೀಟರ್ ಪ್ರಯಾಣಿಸುತ್ತಿದ್ದಾರೆ.

ನಾರ್ಥ್ ಈಸ್ಟ್ ಲೈವ್ ಟಿವಿ ಪ್ರಕಾರ, ಮಿಝೋರಾಂನ ಚಂಫೈ ಜಿಲ್ಲೆಯ ಹ್ರೂಯಿಕಾವ್ನ್ ಗ್ರಾಮದ ಲಾಲ್ರಿಂಗ್ಥರಾ 78ನೇ ವಯಸ್ಸಿನಲ್ಲಿ ತೆಗೆದುಕೊಂಡ ಈ ನಿರ್ಧಾರ ಈಗ ಅನೇಕರಿಗೆ ಸ್ಫೂರ್ತಿಯಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹ್ರೂಯಿಕಾನ್ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (RMSA) ಪ್ರೌಢಶಾಲೆಯಲ್ಲಿ 9ನೇ ತರಗತಿಗೆ ದಾಖಲಾಗಿದ್ದಾರೆ.

ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಖುವಾಂಗ್ಲೆಂಗ್ ಗ್ರಾಮದಲ್ಲಿ 1945 ರಲ್ಲಿ ಜನಿಸಿದ ಲಾಲ್ರಿಂಗ್ಥರಾ ಅವರು ತಮ್ಮ ತಂದೆಯ ಮರಣದ ಕಾರಣ 2 ನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.ತನ್ನ ಹೆತ್ತವರಿಗೆ ಏಕೈಕ ಮಗನಾಗಿದ್ದು ಅವರು ಚಿಕ್ಕವಯಸ್ಸಿನಲ್ಲಿ ತನ್ನ ತಾಯಿಗೆ ಹೊಲದಲ್ಲಿ ಸಹಾಯ ಮಾಡಲು ಮನೆಯಲ್ಲೆ ಉಳಿದಿದ್ದರು ಎಂದು ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡ ನಂತರ, ಅವರು ಅಂತಿಮವಾಗಿ 1995 ರಲ್ಲಿ ನ್ಯೂ ಹ್ರೂಯಿಕಾನ್ ಗ್ರಾಮದಲ್ಲಿ ನೆಲೆಸಿದರು. ಕಡು ಬಡತನದಿಂದ ಅವರ ಶಾಲಾ ಶಿಕ್ಷಣ ಮೊಟಕುಗೊಂಡಿತು.

ಅವರು ತಮ್ಮ ಇಂಗ್ಲಿಷ್ ಕೌಶಲ್ಯಗಳನ್ನು ಸುಧಾರಿಸಲು ಬಯಸಿದ್ದರಿಂದ ಅವರು ಇಳಿ ವಯಸ್ಸಿನಲ್ಲಿ ಶಾಲೆಗೆ ಮರಳಿದ್ದಾರೆ. ಇಂಗ್ಲಿಷ್ನಲ್ಲಿ ಅರ್ಜಿಗಳನ್ನು ಬರೆಯಲು ಹಾಗೂ ದೂರದರ್ಶನ ಸುದ್ದಿ ವರದಿಗಳನ್ನು ಗ್ರಹಿಸಲು ಸಾಧ್ಯವಾಗಿಸುವುದು ಅವರ ಮುಖ್ಯ ಗುರಿಗಳಾಗಿವೆ.

ದಿ ನಾರ್ತ್ ಈಸ್ಟ್ ಟುಡೇ ಪ್ರಕಾರ, ಲಾಲ್ರಿಂಗ್ಥರಾ ಅವರು ಮಿಝೊ ಭಾಷೆಯಲ್ಲಿ ಓದಲು ಮತ್ತು ಬರೆಯಲು ಸಮರ್ಥರಾಗಿದ್ದಾರೆ. ಅವರು ಪ್ರಸ್ತುತ ನ್ಯೂ ಹ್ರೂಯಿಕಾ ನ್ನಲ್ಲಿ ಚರ್ಚ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.

ಲಾಲ್ರಿಂಗ್ಥರಾ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸ್ಫೂರ್ತಿ ಹಾಗೂ ಸವಾಲಾಗಿದ್ದಾರೆ. ಕಲಿಯುವ ಉತ್ಸಾಹ ಹೊಂದಿರುವ ಪ್ರಶಂಸನೀಯ ವ್ಯಕ್ತಿ ಒದಗಿಸಬಹುದಾದ ಎಲ್ಲಾ ಬೆಂಬಲಕ್ಕೆ ಅರ್ಹರಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ವನಲಕಿಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News