ಉತ್ತರಾಖಂಡ: ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕನ ಮನೆಯ ಮೇಲೆ ಗುಂಡು ಹಾರಿಸಿದ ಬಿಜೆಪಿ ನಾಯಕ

Update: 2025-01-27 13:07 IST
Photo of BJP leader firing at legislators house

Screengrab:X/@GAURAV__TYAGI

  • whatsapp icon

ಡೆಹ್ರಾಡೂನ್: ಉತ್ತರಾಖಂಡದ ಖಾನಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಸಚಿವರ ನಡುವಿನ ವೈಮನಸ್ಸು ವಿಕೋಪಕ್ಕೆ ತಿರುಗಿದೆ. ಬಿಜೆಪಿಯ ಮಾಜಿ ಶಾಸಕ ಕುನ್ವರ್ ಪ್ರಣವ್ ಸಿಂಗ್, ಹಾಲಿ ಶಾಸಕ ಉಮೇಶ್ ಕುಮಾರ್ ಅವರ ನಿವಾಸದೆದುರು ಗುಂಡು ಹಾರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತಮ್ಮ ಬೆಂಬಲಿಗರ ಗುಂಪಿನೊಂದಿಗೆ ಶಾಸಕರ ನಿವಾಸದ ಬಳಿ ಬಂದಿರುವ ಕುನ್ವರ್ ಪ್ರಣವ್ ಸಿಂಗ್, ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ, ಶಾಸಕರ ನಿವಾಸದಲ್ಲಿದ್ದ ಸಿಬ್ಬಂದಿಗಳಿಗೆ ಪ್ರಣವ್ ಸಿಂಗ್ ಬೆಂಬಲಿಗರು ಥಳಿಸುತ್ತಿರುವುದು, ಕಲ್ಲು ತೂರಾಟ ನಡೆಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇಂತಹ ಒಂದು ವಿಡಿಯೊವನ್ನು ರವಿವಾರ ಎಕ್ಸ್ ನಲ್ಲಿ ಹಂಚಿಕೊಂಡಿರುವ ಶಾಸಕ ಉಮೇಶ್ ಕುಮಾರ್, “ನಿನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿಯ ಮಾಜಿ ಶಾಸಕ ಪ್ರಣವ್ ಸಿಂಗ್ ಅವರು ತಮ್ಮ ಬೆಂಬಲಿಗ ಗೂಂಡಾಗಳೊಂದಿಗೆ ನನ್ನ ನಿವಾಸದ ಬಳಿಗೆ ಬಂದು, ಡಜನ್ ಗಟ್ಟಲೆ ಶಸ್ತ್ರಾಸ್ತ್ರಗಳಿಂದ ನೂರಾರು ಸುತ್ತು ಗುಂಡು ಹಾರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕೃತ್ಯಕ್ಕೆ ಪ್ರತಿಯಾಗಿ ಪ್ರಣವ್ ಸಿಂಗ್ ಅವರನ್ನು ಕೊಲ್ಲಲು ಶಾಸಕ ಉಮೇಶ್ ಕುಮಾರ್ ಕೂಡಾ ಪಿಸ್ತೂಲ್ ಹಿಡಿದು ಮುನ್ನುಗ್ಗುತ್ತಿರುವುದು ಹಾಗೂ ಪೊಲೀಸರು ಅವರನ್ನು ತಡೆದಿರುವ ವಿಡಿಯೊ ಸರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಘಟನೆ ಬೆನ್ನಲ್ಲೇ ಪ್ರಣವ್ ಸಿಂಗ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಶಾಸಕ ಉಮೇಶ್ ಅವರು ತಮ್ಮ ಪತಿಗೆ ಬೆದರಿಕೆ ಒಡ್ಡಿದ್ದು, ಮಕ್ಕಳ ಮೇಲೆ ಆಯುಧ ಬೀಸಿದ್ದಾರೆ ಎಂದು ಪ್ರಣವ್ ಸಿಂಗ್ ಅವರ ಪತ್ನಿ ದೂರು ದಾಖಲಿಸಿದ್ದಾರೆ.

ಹಾಲಿ ಮತ್ತು ಮಾಜಿ ಶಾಸಕರಿಬ್ಬರ ಮೇಲೂ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಕಡೆಯವರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಹರಿದ್ವಾರ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಡೋಬಲ್ ತಿಳಿಸಿದ್ದಾರೆ.

2012 ಹಾಗೂ 2017ರಂದು ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯಲ್ಲಿ ಪ್ರಣವ್ ಸಿಂಗ್ ಕ್ರಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2022ರಲ್ಲಿ ಪ್ರಣವ್ ಸಿಂಗ್ ಪತ್ನಿ ರಾಣಿ ದೇವಯಾನಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿ ಉಮೇಶ್ ಕುಮಾರ್ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News