ಗುಜರಾತ್: ದಲಿತ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಶಾಸಕಿಯ ಪುತ್ರನಿಗೆ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ
ಗುಜರಾತ್: ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ಜ್ಯೋತಿರಾದಿತ್ಯಸಿಂಹ ಜಡೇಜಾ ಅಲಿಯಾಸ್ ಗಣೇಶ್, ರಾಜ್ಕೋಟ್ ನಗರದ ಗೊಂಡಲ್ ಪಟ್ಟಣದ ಗೊಂಡಲ್ ನಾಗರಿಕ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಜೈಲಿನಲ್ಲಿದ್ದುಕೊಂಡೇ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಜುನಾಗಢ್ ನ ದಲಿತ ವ್ಯಕ್ತಿ ಮೇಲೆ ಹಲ್ಲೆ ಮತ್ತು ಅಪಹರಣ ಪ್ರಕರಣದಲ್ಲಿಗಣೇಶ್ ಗೆ ಹೈಕೋರ್ಟ್ ಜಾಮೀನು ನೀಡಿದೆ.
ನಾಲ್ಕು ತಿಂಗಳ ಹಿಂದೆ NSUI ಜುನಾಗಢ ನಗರ ಘಟಕದ ಅಧ್ಯಕ್ಷ ಸಂಜಯ್ ಅಲಿಯಾಸ್ ಚಂದು ಸೋಲಂಕಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೊಂಡಲ್ ಪಟ್ಟಣದ ನಿವಾಸಿ ಗಣೇಶ್ ಮತ್ತು ಇತರ 10 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎಫ್ಐಆರ್ ಪ್ರಕಾರ, ಆರೋಪಿಗಳು ಸೋಲಂಕಿಯನ್ನು ಕಾರಿನಲ್ಲಿ ಅಪಹರಿಸಿ, ಗೊಂಡಾಲ್ಗೆ ಕರೆದೊಯ್ದು ಹಲ್ಲೆ ನಡೆಸಿ, ಬಂದೂಕು ತೋರಿಸಿ ಬೆದರಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿ ಗಣೇಶ್ ಮತ್ತು ಇತರ ಸಹಚರರ ವಿರುದ್ಧ ಕೊಲೆಯತ್ನ, ಅಪಹರಣ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಜೂ. 5 ರಂದು ಗಣೇಶ್ ಬಂಧನ ನಡೆದಿತ್ತು. ಕೋರ್ಟ್ ಗಣೇಶ್ ಸೇರಿ ಇತರರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಜುನಾಗಢ ಜಿಲ್ಲಾ ಕಾರಾಗೃಹದಲ್ಲಿ ಅವರನ್ನು ಇರಿಸಲಾಗಿತ್ತು.
ಜೈಲಿನಲ್ಲಿದ್ದುಕೊಂಡೇ ಗಣೇಶ್ ಗೊಂಡಲ್ ನಾಗರಿಕ ಸಹಕಾರಿ ಬ್ಯಾಂಕ್ ನ ನಿರ್ದೇಶಕರ ಮಂಡಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದ.