ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಹೇರಿದರೆ ಬಿಜೆಪಿ ನೇತೃತ್ವದ NDA ಜೊತೆಗಿನ ಮೈತ್ರಿ ಅಂತ್ಯ; ಮಿಜೋರಾಂ ಸಿಎಂ ಎಚ್ಚರಿಕೆ

Update: 2023-07-28 13:25 GMT

ಮಿಜೋರಾಂ ಸಿಎಂ ಝೊರಾಮ್ತಂಗ (PTI)

ಐಜ್ವಾಲ್: ಮಿಜೋರಾಂ ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಹೇರಿದರೆ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಬಿಜೆಪಿ ನೇತೃತ್ವದ NDA ಜೊತೆ ತನ್ನ ಸಂಬಂಧಗಳನ್ನು ಕಡಿದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಝೊರಾಮ್ತಂಗ ಅವರು ಗುರುವಾರ ಸುದ್ದಿ ಜಾಲತಾಣ theprint.inಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ,ಇಂತಹ ಹೆಜ್ಜೆಯನ್ನು ಅನಿವಾರ್ಯವಾಗಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳದಿರಲು NDA ಸಾಕಷ್ಟು ವಿವೇಚನೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಜು.18ರಂದು ದಿಲ್ಲಿಯಲ್ಲಿ ನಡೆದಿದ್ದ ಎನ್ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ 38 ಪಕ್ಷಗಳಲ್ಲಿ ಎಮ್ಎನ್ಎಫ್ ಸೇರಿತ್ತು. ಝೊರಾಮ್ತಂಗ ಯುಸಿಸಿ ವಿರುದ್ಧ ಮಾತ್ರವಲ್ಲ,ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎನ್ನುವುದರ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಮಂಗಳವಾರ ಐಝ್ವಾಲ್ನಲ್ಲಿ ಕುಕಿ ಸಮುದಾಯದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದ್ದ ರ್ಯಾಲಿಯಲ್ಲಿಯೂ ಅವರು ಭಾಗವಹಿಸಿದ್ದರು. ಕುಕಿ ಸಮುದಾಯವು ಮಿಜೋಗಳೊಂದಿಗೆ ಆಳವಾದ ಜನಾಂಗೀಯ ಸಂಬಂಧಗಳನ್ನು ಹಂಚಿಕೊಂಡಿದೆ.

ಈ ಧೋರಣೆಗಳು ಎನ್ಡಿಎದ ಸದಸ್ಯಪಕ್ಷವಾಗಿ ಎಂಎನ್ಎಫ್ ನಿಲುವುಗಳೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬ ಪ್ರಶ್ನೆಗೆ ರೆರಾಮ್ತಂಗಾ,‘ಎಂಎನ್ಎಫ್ ಎನ್ಡಿಎಗೆ ವಿಷಯಾಧಾರಿತ ಬೆಂಬಲವನ್ನು ನೀಡುತ್ತದೆ,ಆದರೆ ಅದರರ್ಥ ಪ್ರತಿಯೊಂದೂ ವಿಷಯದಲ್ಲಿ ನಾವು ಅವರಿಗೆ ವಿಧೇಯರಾಗಿರುತ್ತೇವೆ ಎಂದಲ್ಲ’ ಎಂದು ಉತ್ತರಿಸಿದರು.

‘ಉದಾಹರಣೆಗೆ ಇಲ್ಲಿ ಮಿಜೋರಾಂ ನಲ್ಲಿ ಯುಸಿಸಿ ಹೇರುವುದಾದರೆ ನಾವು ಖಂಡಿತವಾಗಿಯೂ ಎನ್ಡಿಎ ಜೊತೆಯಲ್ಲಿ ಇರುವುದಿಲ್ಲ. ಆದರೆ ಇದೇ ವೇಳೆ,ಅವರು ಹಾಗೆ ಮಾಡುತ್ತಾರೆ ಎಂದು ನಾನು ಭಾವಿಸಿಲ್ಲ’ ಎಂದರು.

ಯುಸಿಸಿ ಹೇರಿಕೆಯು ತಮಗೆ ಯಾವುದೇ ಸಹಾಯವನ್ನು ಮಾಡುವುದಿಲ್ಲ ಎನ್ನುವುದನ್ನು ಕಂಡುಕೊಳ್ಳಲು ಎನ್ಡಿಎ ನಾಯಕರು ಸಾಕಷ್ಟು ಬುದ್ಧಿವಂತರು ಮತ್ತು ಪ್ರಬುದ್ಧರಾಗಿದ್ದಾರೆ ಎಂದು ಒತ್ತಿ ಹೇಳಿದ ಝೊರಾಮ್ತಂಗ, ‘ನಾವು ಎನ್ಡಿಎ ಅನ್ನು ತೊರೆಯುವುದನ್ನು ಅನಿವಾರ್ಯವಾಗಿಸುವ ಯಾವುದೇ ಸಮಸ್ಯೆಯನ್ನು ಅವರು ಸೃಷ್ಟಿಸುತ್ತಾರೆ ಎಂದು ನಾನು ಭಾವಿಸಿಲ್ಲ’ ಎಂದರು.

ಮಿಜೋರಾಂ ಮುಖ್ಯಮಂತ್ರಿಗಳು ಇತರ ರಾಜ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಬುಧವಾರದ ಹೇಳಿಕೆಯ ಕುರಿತು ಪ್ರಶ್ನೆಗೆ ಪ್ರಶ್ನೆಗೆ ಉತ್ತರಿಸಿದ ರೆರಾಮ್ತಂಗಾ, ನಿರಾಶ್ರಿತರು ಮಿಜೋರಾಂ ಗೆ ಲಗ್ಗೆಯಿಡುತ್ತಿರುವುರಿಂದ ಮಣಿಪುರದಲ್ಲಿನ ಅಶಾಂತಿಯು ತನ್ನನ್ನು ಬಾಧಿಸುತ್ತಿದೆ ಎಂದು ಪ್ರತಿಪಾದಿಸಿದರು.

ಈಶಾನ್ಯ ಭಾರತದಲ್ಲಿಯ ಎಲ್ಲ ಮಿಜೋ ವಸತಿ ಪ್ರದೇಶಗಳನ್ನು ಒಂದೇ ಆಡಳಿತದಡಿ ಮರು ಸೇರ್ಪಡೆಗೊಳಿಸಬೇಕು ಎಂದು ಪ್ರತಿಪಾದಿಸಿದ ಅವರು,ಇದು ಮಿಜೋರಾಂ ನಲ್ಲಿಯ ಎರಡು ದಶಕಗಳ ಬಂಡಾಯಕ್ಕೆ ಅಂತ್ಯ ಹಾಡಿದ್ದ 1986ರ ಶಾಂತಿ ಒಪ್ಪಂದದ ಪ್ರಮುಖ ಅಂಶವಾಗಿತ್ತು ಎಂದು ಒತ್ತಿ ಹೇಳಿದರು.

ಕೇಂದ್ರ ಮತ್ತು ಮಣಿಪುರ ಸರಕಾರಗಳು ಮೈತೆಯಿಗಳು ಮತ್ತು ಕುಕಿಗಳೊಂದಿಗೆ ಸಮಾಲೋಚಿಸಬೇಕು ಮತ್ತು ಸಮಸ್ಯೆಯನ್ನು ರಾಜಕೀಯವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಮಣಿಪುರ ಬಿಕ್ಕಟ್ಟಿಗೆ ಅದೊಂದೇ ಪರಿಹಾರವಾಗಿದೆ ಎಂದರು.

ಮಣಿಪುರದ ನಿರಾಶ್ರಿತರಿಗೆ ಮತ್ತು ಆ ರಾಜ್ಯದಲ್ಲಿ ಸ್ಥಳಾಂತರಗೊಂಡವರಿಗೆ ಯಾವುದೇ ನೆರವು ಒದಗಿಸದ ಕೇಂದ್ರ ಸರಕಾರದ ವರ್ತನೆ ತನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಹೇಳಿದ ಝೊರಾಮ್ತಂಗ,ವಿಭಿನ್ನ ಕೋನದಿಂದ ಈ ಸಮಸ್ಯೆಯನ್ನು ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಕೋರಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News