ನನ್ನ ವಿರುದ್ಧದ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧ: ಉದಯನಿಧಿ ಸ್ಟಾಲಿನ್
ಚೆನ್ನೈ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ತೀವ್ರ ವಿರೋಧ ಎದುರಿಸುತ್ತಿರುವ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಬಿಜೆಪಿ ನಾಯಕರು ತಮ್ಮ ಹೇಳಿಕೆಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಸಂಬಂಧ ದಾಖಲಿಸುವ ಎಲ್ಲಾ ಪ್ರಕರಣಗಳನ್ನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಉದಯನಿಧಿ, “ಜಗತ್ತನ್ನೇ ತಿರುಗುವ ಪ್ರಧಾನಿ ಮೋದಿಗೆ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಶ್ನೆಗಳನ್ನು ಎದುರಿಸಲು ಭಯ ಏಕೆ?” ಎಂದು ಪ್ರಶ್ನಿಸಿದ್ದಾರೆ.
“ಕಳೆದ 9 ವರ್ಷಗಳಿಂದ ನೀಡಿರುವ ನಿಮ್ಮ (ಬಿಜೆಪಿ) ಭರವಸೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ, ನಮ್ಮ ಕಲ್ಯಾಣಕ್ಕಾಗಿ ನೀವು ಏನು ಮಾಡಿದ್ದೀರಿ ಎಂಬುದು ಫ್ಯಾಸಿಸ್ಟ್ ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶವು ಒಗ್ಗಟ್ಟಿನಿಂದ ಎತ್ತುತ್ತಿರುವ ಪ್ರಶ್ನೆಯಾಗಿದೆ. ಬಿಜೆಪಿ ನಾಯಕರು ನನ್ನ ಭಾಷಣವನ್ನು 'ಜನಾಂಗೀಯ ಹತ್ಯೆಗೆ ಪ್ರಚೋದನೆ' ಎಂದು ತಿರುಚಿದ್ದಾರೆ. ಅದನ್ನು ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಸ್ತ್ರವೆಂದು ಪರಿಗಣಿಸಿದ್ದಾರೆ," ಎಂದು ಉದಯನಿಧಿ ಹೇಳಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ʼನಕಲಿ ಸುದ್ದಿʼಯನ್ನು ಆಧರಿಸಿ ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಉದಯನಿಧಿ ಹೇಳಿದರು.
"ಗೌರವಾನ್ವಿತ ಸ್ಥಾನಗಳನ್ನು ಹೊಂದಿರುವ ಅವರು ನನ್ನನ್ನು ನಿಂದಿಸುತ್ತಿರುವುದಕ್ಕಾಗಿ ನಾನೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಿಸಬೇಕು” ಎಂದು ಉದಯನಿಧಿ ಹೇಳಿದರು.
ನಾನು ಡಿಎಂಕೆಯ ಸಂಸ್ಥಾಪಕ ದಿವಂಗತ ಸಿಎನ್ ಅಣ್ಣಾದೊರೈ ಅವರ ದ್ರಾವಿಡ ಧೀಮಂತ ರಾಜಕೀಯ ವಾರಸುದಾರರಲ್ಲಿ ಒಬ್ಬ. ನಾವು ಯಾವುದೇ ಧರ್ಮದ ಶತ್ರುಗಳಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
“ಒಂದು ಧರ್ಮವು ಜನರನ್ನು ಸಮಾನತೆಯ ಕಡೆಗೆ ಕೊಂಡೊಯ್ಯುತ್ತದೆ ಮತ್ತು ಭ್ರಾತೃತ್ವವನ್ನು ಕಲಿಸುತ್ತದೆ ಎಂದರೆ ಆಗ ನಾನು ಆಧ್ಯಾತ್ಮಿಕವಾದಿಯಾಗುತ್ತೇನೆ, ಅದೇ ಧರ್ಮವು ಜಾತಿಗಳ ಹೆಸರಿನಲ್ಲಿ ಜನರನ್ನು ವಿಭಜಿಸಿದರೆ, ಅಸ್ಪೃಶ್ಯತೆ ಮತ್ತು ಗುಲಾಮಗಿರಿಯನ್ನು ಕಲಿಸಿದರೆ ಅದನ್ನು ವಿರೋಧಿಸುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ ” ಎಂಬ ಅಣ್ಣಾದೊರೈ ಹೇಳಿಕೆಯನ್ನು ಉದಯನಿಧಿ ಉಲ್ಲೇಖಿಸಿದ್ದಾರೆ.
ಎಲ್ಲಾ ಜೀವಗಳ ಹುಟ್ಟು ಸಮಾನ ಎಂದು ಕಲಿಸುವ ಎಲ್ಲಾ ಧರ್ಮಗಳನ್ನು ಡಿಎಂಕೆ ಗೌರವಿಸುತ್ತದೆ ಎಂದು ಅವರು ಹೇಳಿದರು.