ಜನತೆಯೊಂದಿಗೆ ಮೋದಿ ಸಂಪರ್ಕ ಕಡಿದುಕೊಂಡಿದ್ದಾರೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

Update: 2024-04-14 16:48 GMT

 ಪ್ರಿಯಾಂಕಾ ಗಾಂಧಿ | PC : PTI

ಜೈಪುರ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನರೇಂದ್ರ ಮೋದಿ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಅವರು ಸಂಪೂರ್ಣವಾಗಿ ಜನತೆಯಿಂದ ಹಾಗೂ ಅವರ ಸಮಸ್ಯೆಗಳಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದಾರೆ. ಅವರ ಸುತ್ತಮುತ್ತಲಿನವರು ಕೂಡಾ ಅವರೊಂದಿಗೆ ಈ ಸತ್ಯವನ್ನು ಹೇಳಲು ಭಯಪಡುತ್ತಿದ್ದಾರೆ ಎಂದರು.

ರಾಜಸ್ತಾನದ ಜಾಲೋರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘‘ಒಬ್ಬ ವ್ಯಕ್ತಿ ವ್ಯಾಪಕ ಅಧಿಕಾರವನ್ನು ಅನುಭವಿಸುತ್ತಿರುವಾಗ, ಜನರು ಆತನಿಗೆ ಸತ್ಯವನ್ನು ಹೇಳಲಾರರು. ವಾಸ್ತವತೆಯ ಕುರಿತು ಮಾತನಾಡಲು ಅಧಿಕಾರಿಗಳು ಹಾಗೂ ಸಹದ್ಯೋಗಿಗಳು ಭಯಪಡುತ್ತಾರೆ. ಇದರಿಂದಾಗಿ ವ್ಯಕ್ತಿಗಳು ಜನತೆಯಿಂದ ಸಂಪರ್ಕವನ್ನು ಕಡಿದುಕೊಳ್ಳುತ್ತಾರೆ ಎಂದರು.

ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅವರ ಪುತ್ರ, ಜಾಲೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೈಭವ್ ಗೆಹ್ಲೋಟ್ ಅವರ ಬೆಂಬಲವಾಗಿ ಈ ಚುನಾವಣಾ ಪ್ರಚಾರ ರ್ಯಾಲಿಯನ್ನು ಆಯೋಜಿಸಲಾಗಿತ್ತು.

‘‘ ಮೋದಿಯವರು ದೇಶದ ಜನತೆಯೊಂದಿಗೆ ಸಂಪೂರ್ಣವಾಗಿ ಸಂಪರ್ಕವನ್ನು ಕಡಿದುಕೊಂಡಿದ್ದಾರೆಂಬ ಭಾವನೆ ನನ್ನಲ್ಲಿ ನಿಜವಾಗಲೂ ಮೂಡುತ್ತಿದೆ ’’ ಎಂದು ಪ್ರಿಯಾಂಕಾ ಹೇಳಿದರು.

ಹಣದುಬ್ಬರ ಹಾಗೂ ನಿರುದ್ಯೋಗವು ಭಾರತವು ಪ್ರಸಕ್ತ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳಾಗಿದ್ದು, ಆ ಬಗ್ಗೆ ಯಾರೂ ಕಿವಿಗೊಡುತ್ತಿಲ್ಲವೆಂದು ಅವರು ಹೇಳಿದರು.

ಭಾರತದಲ್ಲಿ ಜಿ20 ಶೃಂಗಸಭೆಯಂತಹ ಕಾರ್ಯಕ್ರಮಗಳು ನಡೆದಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರದಿಂದ ಬಡಜನರು ಹಾಗೂ ನಿರುದ್ಯೋಗದಿಂದ ಯುವಜನರು ನರಳುತ್ತಿರುವುದು ಇನ್ನೊಂದು ವಾಸ್ತವವಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವೆನೆಂಬ ಬಿಜೆಪಿಯ ಘೋಷಣೆಗಳಲ್ಲಿ ಹುರುಳಿಲ್ಲ. ಪ್ರತಿಪಕ್ಷಗಳ ಬಾಯಿಮಚ್ಚಿಸಲು ಮಾತ್ರವಷ್ಟೇ ಅವು ಬಯಸುತ್ತಿವೆ’’ ಎಂದು ಗಾಂಧಿ ತಿಳಿಸಿದರು.

ಎಪ್ರಿಲ್ 19ರಿಂದ ಮೊದಲುಗೊಂಡು ಲೋಕಸಭಾ ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿವೆ ಹಾಗೂ ಜೂನ್ 4ರಂದು ಮತಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News