ಮೋದಿ ಸಂವಿಧಾನವನ್ನು ಎಂದೂ ಓದದೆ ಇರುವುದರಿಂದ ಅವರ ಪಾಲಿಗೆ ಸಂವಿಧಾನ ಖಾಲಿಯಂತೆ ಕಂಡಿರಬೇಕು: ರಾಹುಲ್ ಗಾಂಧಿ ವ್ಯಂಗ್ಯ
ಮುಂಬೈ: “ಪ್ರಧಾನಿ ನರೇಂದ್ರ ಮೋದಿ ತಮ್ಮ ಜೀವನದಲ್ಲೆಂದೂ ಸಂವಿಧಾನವನ್ನು ಓದದೆ ಇರುವುದರಿಂದ, ಅವರಿಗೆ ಸಂವಿಧಾನ ಪ್ರತಿ ಖಾಲಿಯಂತೆ ಕಂಡಿರಬಹುದು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಗುರುವಾರ ನಂದುಬಾರ್ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ, “ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ದೇಶವು ಸಂವಿಧಾನದ ಮೇಲೆ ನಡೆಯಬೇಕು ಎಂದು ಕಾಂಗ್ರೆಸ್ ಮತ್ತು ಇಂಡಿಯಾ ಮಿತ್ರಪಕ್ಷಗಳು ಹೇಳುತ್ತಿವೆ. ಆದರೆ, ನಾನು ಸಾರ್ವಜನಿಕ ಸಭೆಗಳಲ್ಲಿ ಖಾಲಿ ಸಂವಿಧಾನ ಪ್ರತಿಯನ್ನು ಪ್ರದರ್ಶಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಅವರು ತಮ್ಮ ಜೀವನದಲ್ಲೆಂದೂ ಸಂವಿಧಾನವನ್ನು ಓದಿಯೇ ಇಲ್ಲವಾದ್ದರಿಂದ, ಅವರ ಕಣ್ಣಿಗೆ ಸಂವಿಧಾನ ಪ್ರತಿ ಖಾಲಿಯಂತೆ ಕಾಣಿಸುತ್ತಿರಬಹುದು” ಎಂದು ಅವರು ವ್ಯಂಗ್ಯವಾಡಿದರು.
“ನಮ್ಮ ಸಂವಿಧಾನವು ದೇಶದ ಆತ್ಮ ಹಾಗೂ ರಾಷ್ಟ್ರೀಯ ನಾಯಕರು ಹಾಕಿಕೊಟ್ಟಿರುವ ಸಿದ್ಧಾಂತಗಳನ್ನು ಒಳಗೊಂಡಿದೆ” ಎಂದು ಹೇಳಿದ ರಾಹುಲ್ ಗಾಂಧಿ, “ಬುಡಕಟ್ಟು ಜನಾಂಗಗಳನ್ನು ಆದಿವಾಸಿಗಳು ಎಂದು ಕರೆಯುವ ಬದಲು ವನವಾಸಿಗಳು ಎಂದು ಕರೆಯುವ ಮೂಲಕ, ಆರೆಸ್ಸೆಸ್ ಅವರನ್ನು ಅವಮಾನಿಸುತ್ತಿದೆ" ಎಂದೂ ಆರೋಪಿಸಿದರು.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಜಾತಿ ಜನಗಣತಿ ನಡೆಸಲಾಗುವುದು ಎಂದು ಭರವಸೆ ನೀಡಿರುವ ರಾಹುಲ್ ಗಾಂಧಿ, “ಶೇ. 50ರಷ್ಟು ಮೀಸಲಾತಿಯ ಗೋಡೆಯನ್ನು ಕೆಡವಿ ಹಾಕಲು ಪ್ರಧಾನಿ ನರೇಂದ್ರ ಮೋದಿಯ ಎದುರಿಗೇ ಕಾಂಗ್ರೆಸ್ ಜಾತಿ ಜನಗಣತಿ ನಡೆಸಲಿದೆ. ನಾವು ಮೀಸಲಾತಿಯನ್ನು ಶೇ. 50ರ ಮಿತಿಗಿಂತ ಆಚೆ ವಿಸ್ತರಿಸುತ್ತೇವೆ” ಎಂದು ಹೇಳಿದರು.