ದೇಶದಲ್ಲಿ ಸರ್ವಾಧಿಕಾರ ತರಲು ಮೋದಿ ಯೋಜನೆ ರೂಪಿಸುತ್ತಿದ್ದಾರೆ: ಕೇಜ್ರಿವಾಲ್ ಆರೋಪ

Update: 2024-05-11 14:50 GMT

 ಅರವಿಂದ ಕೇಜ್ರಿವಾಲ್ | PC : PTI 

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಹೊರಬಂದ ಒಂದು ದಿನದ ಬಳಿಕ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ನಮ್ಮ ಮತ್ತು ಇತರ ಪ್ರತಿಪಕ್ಷಗಳನ್ನು ದಮನಿಸುತ್ತಿದ್ದಾರೆ ಮತ್ತು ದೇಶದಲ್ಲಿ ಸರ್ವಾಧಿಕಾರವನ್ನು ತರುವ ಯೋಜನೆಯಲ್ಲಿ ತೊಡಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಆರೋಪಿಸಿದ್ದಾರೆ.

‘‘ಒಂದು ದೇಶ, ಒಂದು ನಾಯಕ’’ ಎಂಬ ಬಿಜೆಪಿಯ ಘೋಷ ವಾಕ್ಯವನ್ನು ವ್ಯಂಗ್ಯವಾಡಿರುವ ಕೇಜ್ರಿವಾಲ್, ಬಿಜೆಪಿಯು ಭ್ರಷ್ಟ ನಾಯಕರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ತಾನೇ ತಂದಿರುವ ‘‘75 ವರ್ಷಕ್ಕೆ ರಾಜಕೀಯ ನಿವೃತ್ತಿ’’ ನಿಯಮವನ್ನು ಪ್ರಧಾನಿ ಮೋದಿ ಪಾಲಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಶನಿವಾರ ಕನಾಟ್‌ಪ್ಲೇಸ್‌ನಲ್ಲಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಇಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘‘ಬಿಜೆಪಿಯು ನಮ್ಮ ನಾಲ್ವರು ಉನ್ನತ ನಾಯಕರನ್ನು ಜೈಲಿಗೆ ಕಳುಹಿಸಿದೆ- ಕೇಜ್ರಿವಾಲ್, ಮನೀಶ್ ಸಿಸೋಡಿಯ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್. ಇದು ನಮ್ಮನ್ನು ದಮನಿಸಲು ಅವರು ಮಾಡಿರುವ ಪ್ರಯತ್ನ. ಪ್ರಧಾನಿ ಮೋದಿ ಆಮ್ ಆದ್ಮಿ ಪಕ್ಷವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ, ದೇಶಕ್ಕೆ ಉತ್ತಮ ಭವಿಷ್ಯವನ್ನು ನಾವು ತರಬಲ್ಲೆವು ಎನ್ನುವುದು ಅವರಿಗೆ ಗೊತ್ತಿದೆ. ಮೋದೀಜಿ ಅತ್ಯಂತ ಅಪಾಯಕಾರಿ ಯೋಜನೆಯೊಂದನ್ನು ಹೊಂದಿದ್ದಾರೆ- ‘ಒಂದು ದೇಶ, ಒಂದು ನಾಯಕ’ ಯೋಜನೆ’’ ಎಂದು ಕೇಜ್ರಿವಾಲ್ ಆರೋಪಿಸಿದರು.

‘‘ಬಿಜೆಪಿಯು ನನ್ನನ್ನು ಜೈಲಿಗೆ ಕಳುಹಿಸಿತು. ತಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಅವರು ಎಲ್ಲಾ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾದರೆ ನಮ್ಮನ್ನು ನೋಡಿ ಕಲಿಯಿರಿ. ನಾವು 2015ರಲ್ಲಿ ಸರಕಾರ ಸ್ಥಾಪಿಸಿದಾಗ, 5 ಲಕ್ಷ ರೂಪಾಯಿ ಕೊಡುವಂತೆ ನಮ್ಮ ಸಚಿವರೊಬ್ಬರು ಓರ್ವ ಅಂಗಡಿ ಮಾಲೀಕರನ್ನು ಕೇಳಿದ್ದಾರೆ ಎಂದು ಹೇಳುವ ಧ್ವನಿಮುದ್ರಿಕೆಯೊಂದನ್ನು ಒಬ್ಬರು ನನಗೆ ಕಳುಹಿಸಿದರು. ಅದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನಾನು ಆ ಸಚಿವರನ್ನು ಸಿಬಿಐಗೆ ಒಪ್ಪಿಸಿದೆ’’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹೇಳಿದರು.

► "ಅವರು ಗೆದ್ದರೆ 2 ತಿಂಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಬದಲಾವಣೆ":

ಈ ಬಾರಿ ಅವರು ಚುನಾವಣೆಯಲ್ಲಿ ಗೆದ್ದರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನ್ನು ಎರಡು ತಿಂಗಳಲ್ಲಿ ಬದಲಾಯಿಸುತ್ತಾರೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದರು.

‘‘ಅವರ ಪಕ್ಷದ ಎಲ್ಲಾ ಜನಪ್ರಿಯ ನಾಯಕರನ್ನು ದಮನಿಸಲು ಅವರು ಯತ್ನಿಸಿದ್ದಾರೆ. ವಸುಂಧರಾ ರಾಜೆ ಮತ್ತು ಶಿವರಾಜ್ ಸಿಂಗ್ ಚೌಹಾಣ್‌ರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮುಂದಿನ ಸರದಿ ಆದಿತ್ಯನಾಥ್ ಎನ್ನುವ ಬಗ್ಗೆ ಯಾವುದೇ ಸಂದೇಹವಿಲ್ಲ’’ ಎಂದು ದಿಲ್ಲಿ ಮುಖ್ಯಮಂತ್ರಿ ಹೇಳಿಕೊಂಡರು.

► "75 ವರ್ಷದ ಬಳಿಕ ಮೋದಿ ನಿವೃತ್ತರಾಗುತ್ತಾರಾ?":

‘‘ನಿಮ್ಮ ಪ್ರಧಾನಿ ಯಾರು ಎಂಬುದಾಗಿ ಬಿಜೆಪಿಯು ‘ಇಂಡಿಯಾ’ ಮೈತ್ರಿಕೂಟವನ್ನು ಪದೇ ಪದೇ ಕೇಳುತ್ತಿದೆ. ನಾನು ಅವರನ್ನು ಕೇಳುತ್ತೇನೆ- ಒಂದು ವರ್ಷದ ಬಳಿಕ ನಿಮ್ಮ ಪ್ರಧಾನಿ ಯಾರಾಗಲಿದ್ದಾರೆ? ಈ ವರ್ಷದ ಸೆಪ್ಟಂಬರ್‌ನಲ್ಲಿ ಪ್ರಧಾನಿ ಮೋದಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. 75 ವರ್ಷ ಆದವರು ನಿವೃತ್ತಿ ಹೊಂದಬೇಕು ಎಂಬ ನಿಯಮವನ್ನು ತಂದವರೇ ಅವರು. ಹಾಗಾದರೆ, ಮೋದಿಯ ಗ್ಯಾರಂಟಿಯನ್ನು ಯಾರು ಈಡೇರಿಸುತ್ತಾರೆ? ಅಮಿತ್ ಶಾ ಪೂರೈಸುತ್ತಾರಾ?’’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

► "ಬಿಜೆಪಿಯು 230ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ"

‘‘ನಾನು ಪರಿಣತರು ಮತ್ತು ಚುನಾವಣಾ ತಜ್ಞರ ಜೊತೆಗೆ ಮಾತನಾಡಿದ್ದೇನೆ. ಬಿಜೆಪಿಯು 220-230ಕ್ಕಿಂತ ಹೆಚ್ಚು ಸ್ಥಾನವನ್ನು ಪಡೆಯುವುದಿಲ್ಲ ಎನ್ನುವುದು ನನ್ನ ಅಂದಾಜಾಗಿದೆ. ಮುಂದಿನ ಸರಕಾರವನ್ನು ರಚಿಸುವುದು ಇಂಡಿಯಾ ಮೈತ್ರಿಕೂಟ ಮತ್ತು ಆಮ್ ಆದ್ಮಿ ಪಕ್ಷವು ಅದರ ಭಾಗವಾಗಿರುತ್ತದೆ. ಆಗ ನಾವು ದಿಲ್ಲಿಗೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡುತ್ತೇವೆ. ಆಗ ದಿಲ್ಲಿಯು ಜನರ ರಾಜ್ಯಪಾಲರನ್ನು ಹೊಂದಿರುತ್ತದೆ, ಗುಜರಾತ್‌ನ ಒಬ್ಬ ವ್ಯಕ್ತಿಯನ್ನಲ್ಲ’’ ಎಂದರು.

► "ನಾನು ಯಾಕೆ ರಾಜೀನಾಮೆ ನೀಡಲಿಲ್ಲ?"

ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ತನ್ನನ್ನು ಬಂಧಿಸಿದ ನಂತರವೂ ತಾನು ಯಾಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿಲ್ಲ ಎನ್ನುವುದಕ್ಕೂ ಕೇಜ್ರಿವಾಲ್ ಕಾರಣವನ್ನು ನೀಡಿದರು.

‘‘ನನಗೆ ಯಾವುದೇ ಹುದ್ದೆಯಲ್ಲಿ ಆಸಕ್ತಿಯಿಲ್ಲ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, 49 ದಿನಗಳಲ್ಲೇ ರಾಜೀನಾಮೆ ನೀಡಿದ್ದೆ. ಆದರೆ, ಬಂಧನಕ್ಕೊಳಗಾದ ಬಳಿಕ ನಾನು ಯಾಕೆ ರಾಜೀನಾಮೆ ನೀಡಲಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಆಪ್ ದಿಲ್ಲಿಯಲ್ಲಿ ಅಭೂತಪೂರ್ವ ಅಂತರದಿಂದ ಚುನಾವಣೆಯನ್ನು ಗೆದ್ದಿದೆ. ಮುಂದಿನ 20 ವರ್ಷಗಳಲ್ಲೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಬಂಧಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಮತ್ತು ಆಪ್ ಸರಕಾರ ಬೀಳುತ್ತದೆ ಎಂದು ಭಾವಿಸಿ ಅವರು ಪಿತೂರಿ ಹೂಡಿದರು. ನಾನು ರಾಜೀನಾಮೆ ನೀಡುವುದಿಲ್ಲ ಮತ್ತು ಜೈಲಿನಿಂದಲೇ ಸರಕಾರವನ್ನು ನಡೆಸುತ್ತೇನೆ ಎಂದು ನಾನು ಹೇಳಿದೆ. ಹೇಮಂತ್ ಸೊರೇನ್ ಕೂಡ ರಾಜೀನಾಮೆ ನೀಡಬಾರದಿತ್ತು’’ ಎಂದು ಆಪ್ ಮುಖ್ಯಸ್ಥ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News