ಮುಂದಿನ ಪೀಳಿಗೆಗೆ ದಾರಿ ಮಾಡಿ ಕೊಡುವ ಬದಲು ಪ್ರಧಾನಿ ಹುದ್ದೆಯನ್ನು ಮರಳಿ ಪಡೆಯಲು ಮೋದಿ ಉತ್ಸುಕರಾಗಿದ್ದಾರೆ: ಉದ್ಧವ್ ಠಾಕ್ರೆ

Update: 2024-05-17 16:02 GMT

ನರೇಂದ್ರ ಮೋದಿ ,  ಉದ್ದವ್ ಠಾಕ್ರೆ | PC :PTI 

ಥಾಣೆ: ತನ್ನನ್ನು ಹಾಗೂ ಎನ್ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಪದೇ ಪದೇ ಗುರಿಯಾಗಿರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ ಅವರು, ನರೇಂದ್ರ ಮೋದಿ ಮುಂದಿನ ಪೀಳಿಗೆಗೆ ದಾರಿ ಮಾಡಿ ಕೊಡುವ ಬದಲು ಪ್ರಧಾನಿ ಹುದ್ದೆಯನ್ನು ಮರಳಿ ಪಡೆಯಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

ಹಾಲಿ ಶಾಸಕ ಹಾಗೂ ಅವರ ಪಕ್ಷದ ಅಭ್ಯರ್ಥಿ ರಾಜನ್ ವಿಚಾರೆ ಅವರ ಪರವಾಗಿ ಥಾಣೆಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಠಾಕ್ರೆ ಈ ಸ್ಪರ್ಧೆ ನಿಷ್ಠೆ ಹಾಗೂ ದ್ರೋಹದ ನಡುವಿನ ಸಂಘರ್ಷ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಥಾಣೆ ಲೋಕಸಭಾ ಕ್ಷೇತ್ರಕ್ಕೆ ನರೇಶ್ ಮ್ಹಾಸ್ಕೆ ಅವರನ್ನು ನಾಮನಿರ್ದೇಶಿಸಿದೆ. ಮುಂಬೈನ 6 ಸ್ಥಾನಗಳ ಸಹಿತ 12 ಇತರ ಸ್ಥಾನಗಳಿಗೆ ಮೇ 20ರಂದು ಐದನೇ ಹಂತದ ಮತದಾನ ನಡೆಯಲಿದೆ.

2022ರಲ್ಲಿ ಮೂಲ ಶಿವಸೇನೆಯನ್ನು ವಿಭಜನೆಗೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಈ ಪ್ರದೇಶದ ಪ್ರಭಾವಿ ನಾಯಕ ಶಿಂಧೆ ಅವರಿಗೆ ಥಾಣೆ ಪ್ರತಿಷ್ಠೆಯ ಕಣವಾಗಿದೆ. ಆದರೆ, ಠಾಕ್ರೆ ಅವರು ಮುಖ್ಯವಾಗಿ ಮೋದಿ ಹಾಗೂ ಅವರ ನೀತಿಗಳನ್ನು ಗುರಿಯಾಗಿರಿಸಿಕೊಂಡಿದ್ದಾರೆ.

ಮೋದಿ ಅವರು ವಾಕ್ಚಾತುರ್ಯದ ಮೂಲಕ ವಿವಾದಗಳನ್ನ ಹುಟ್ಟು ಹಾಕುತ್ತಿದ್ದಾರೆ ಮತ್ತು ಬಿಜೆಪಿ ಬಹುಮತ ಪಡೆಯುವ ಭರವಸೆಯಿಂದ ಕುಟುಂಬ ರಾಜಕಾರಣವನ್ನು ಮುಂದಿಟ್ಟು ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಅವರನ್ನು ಪದೇ ಪದೇ ಗುರಿಯಾಗಿರಿಸಿರುವುದಕ್ಕೆ ಶಿವಸೇನೆ (ಯುಬಿಟಿ) ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗಿನ ತಮ್ಮ ಭಾಷಣದಲ್ಲಿ ಮೋದಿ ಅವರು ಠಾಕ್ರೆ ಅವರ ಪಕ್ಷವನ್ನು ‘ನಕಲಿ ಸೇನೆ’ ಎಂದು ಕರೆದಿದ್ದರು ಹಾಗೂ ಪವಾರ್ ಅವರನ್ನು ‘ಅಲೆದಾಡುವ ಆತ್ಮ’ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News