ಚುನಾವಣೆಗೆ ಮುನ್ನ 100 ದಿನಗಳ ಅಜೆಂಡಾದ ಮೋದಿ ತುತ್ತೂರಿ, 95 ದಿನಗಳ ನಂತರವೂ ಸರಕಾರ ನಿಷ್ಕ್ರಿಯವಾಗಿದೆ : ಖರ್ಗೆ ದಾಳಿ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಅವರು 100 ದಿನಗಳ ಕಾರ್ಯಸೂಚಿಯ ಕುರಿತು ದೊಡ್ಡದಾಗಿ ತುತ್ತೂರಿ ಊದಿದ್ದರು. ಆದರೆ ಚುನಾವಣೆಗಳು ಮುಗಿದು 95 ದಿನಗಳು ಕಳೆದಿದ್ದರೂ ಅವರ ಸಮ್ಮಿಶ್ರ ಸರಕಾರದ ನಿಷ್ಕ್ರಿಯತೆಗಳ ಗಂಭೀರ ಪರಿಣಾಮಗಳಿಂದ ದೇಶವು ನರಳುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿಯವರ 100 ದಿನಗಳ ಕಾರ್ಯಸೂಚಿ ಏನೆಂದು ಯಾರಿಗೂ ತಿಳಿದಿಲ್ಲ. ಆದರೆ ಸರಕಾರದ ನಿಷ್ಕ್ರಿಯತೆಯ ಪರಿಣಾಮಗಳನ್ನು ದೇಶವು ಎದುರಿಸುತ್ತಲೇ ಇದೆ. 95 ದಿನಗಳು ಕಳೆದಿವೆ, ಅವರ ಸರಕಾರವಿನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
‘ನಿಮ್ಮ ಸರಕಾರವು ಬಡವರು ಮತ್ತು ಮಧ್ಯಮ ವರ್ಗಗಳ ಬೆನ್ನುಮೂಳೆ ಮುರಿಯಲು ಜನವಿರೋಧಿ ಬಜೆಟ್ ತಂದಿತು. ಜಮ್ಮು-ಕಾಶ್ಮೀರದಲ್ಲಿ, ವಿಶೇಷವಾಗಿ ಜಮ್ಮುವಿನಲ್ಲಿ ಭಯೋತ್ಪಾದಕರ ದಾಳಿಗಳು ಹೆಚ್ಚಿದವು ಮತ್ತು ಭಾರತೀಯ ಸೇನೆಯ ಅನೇಕ ಯೋಧರು ಹುತಾತ್ಮರಾದರು’ ಎಂದು ಮೋದಿಯವರಿಗೆ ನೆನಪಿಸಿರುವ ಖರ್ಗೆ,‘ಕಳೆದ 16 ತಿಂಗಳುಗಳಿಂದಲೂ ಮಣಿಪುರವು ಹೊತ್ತಿ ಉರಿಯುತ್ತಿದೆ ಮತ್ತು ಪ್ರಧಾನ ಮಂತ್ರಿಯವರೇ, ನಿಮಗೆ ಮಣಿಪುರದತ್ತ ನೋಡಲೂ ಸಮಯವಿಲ್ಲ ’ಎಂದು ಕುಟುಕಿದ್ದಾರೆ.
ಮೋದಿ-ಅದಾನಿ ಮೆಗಾ ಹಗರಣದಲ್ಲಿ ಬಹಿರಂಗಗೊಂಡಿರುವ ವಿಷಯಗಳು ಮತ್ತು ಸೆಬಿ ಮುಖ್ಯಸ್ಥೆಯ ಕಾನೂನುಬಾಹಿರ ಕೃತ್ಯಗಳನ್ನು ಇನ್ನು ಮುಂದೆ ಮುಚ್ಚಿಡಲು ಸಾಧ್ಯವಿಲ್ಲ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಬೃಹತ್ ನಿರುದ್ಯೋಗಕ್ಕೆ ಕನ್ನಡಿ ಹಿಡಿದಿರುವ ಕಾಲ್ತುಳಿತಗಳಾಗಿರಲಿ, ಮೋದಿ ಸರಕಾರವು ಪ್ರತಿದಿನವೂ ಯುವಜನರನ್ನು ವಂಚಿಸುತ್ತಿದೆ ಎಂದು ಹೇಳಿರುವ ಖರ್ಗೆ, ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ವಿಮಾನ ನಿಲ್ದಾಣಗಳ ಮೇಲ್ಛಾವಣಿಗಳು, ನೂತನ ಸಂಸತ್ ಕಟ್ಟಡ ಅಥವಾ ಅಯೋಧ್ಯೆಯ ಶ್ರೀರಾಮ ಮಂದಿರ, ಎಕ್ಸ್‌ಪ್ರೆಸ್‌ವೇಗಳು, ಸೇತುವೆಗಳು, ಸುರಂಗಗಳು; ಹೀಗೆ ಏನೇನೆಲ್ಲವನ್ನು ನೀವು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದೀರೋ ಅವುಗಳಲ್ಲೆಲ್ಲ ದೋಷಗಳು ಉಳಿದುಕೊಂಡಿವೆ ಎಂದು ವ್ಯಂಗ್ಯವಾಡಿದ್ದಾರೆ.