ಮುಂಗಾರು ಮಳೆ ಭಾರತದ ಶೇ.80ರಷ್ಟು ಪ್ರದೇಶಗಳನ್ನು ಪ್ರವೇಶಿಸಿದೆ: ಐಎಂಡಿ

Update: 2023-06-26 16:33 GMT

Photo : PTI 

ಹೊಸದಿಲ್ಲಿ: ಈ ವರ್ಷ ಮುಂಗಾರು ಮಳೆ ಈವರೆಗೆ ದೇಶದ ಶೇ.80ರಷ್ಟು ಪ್ರದೇಶಗಳನ್ನು ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಹಿರಿಯ ವಿಜ್ಞಾನಿ ಡಾ.ನರೇಶ್ ಕುಮಾರ್ ಅವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ರವಿವಾರ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡ ಪ್ರದೇಶದಿಂದಾಗಿ ಮುಂಗಾರು ಮಳೆಯು ತ್ವರಿತವಾಗಿ ದೇಶದ ವಿವಿಧ ಭಾಗಗಳನ್ನು ತಲುಪಿದೆ ಎಂದರು.

ದಿಲ್ಲಿ ಮತ್ತು ಮುಂಬೈನಲ್ಲಿ ರವಿವಾರ ಏಕಕಾಲದಲ್ಲಿ ಮುಂಗಾರು ಪ್ರವೇಶವಾಗಿದ್ದು, 62 ವರ್ಷಗಳ ಬಳಿಕ ಈ ವಿದ್ಯಮಾನ ಸಂಭವಿಸಿದೆ. ಸಾಮಾನ್ಯವಾಗಿ ಮುಂಬೈನಲ್ಲಿ ಜೂ.11ಕ್ಕೆ ಮತ್ತು ದಿಲ್ಲಿಯಲ್ಲಿ ಜೂ.27ಕ್ಕೆ ಮುಂಗಾರು ಪ್ರವೇಶವಾಗುತ್ತದೆ. ಆದರೆ ಇದಕ್ಕೂ ಹವಾಮಾನ ಬದಲಾವಣೆಗೂ ನೇರವಾದ ನಂಟನ್ನು ಕಲ್ಪಿಸುವಂತಿಲ್ಲ, ಏಕೆಂದರೆ ಅದನ್ನು ನಿರ್ಧರಿಸಲು 30ರಿಂದ 40 ವರ್ಷಗಳ ದತ್ತಾಂಶಗಳು ಅಗತ್ಯವಾಗುತ್ತವೆ ಎಂದು ಡಾ.ಕುಮಾರ ತಿಳಿಸಿದರು.

ಈ ವರ್ಷ ಮುಂಗಾರು ಮಳೆ ಹೊಸ ಮಾದರಿಯಲ್ಲಿ ದೇಶದ ವಿವಿಧ ಭಾಗಗಳನ್ನು ತಲುಪಿದೆ. ಸಾಮಾನ್ಯವಾಗಿ ಕಡಿಮೆ ಒತ್ತಡದ ವಲಯವು ಮುಂಗಾರು ಮಳೆಯನ್ನು ಸಕ್ರಿಯಗೊಳಿಸುತ್ತದೆ. ಕಡಿಮೆ ಒತ್ತಡ ವಲಯದಿಂದಾಗಿ ಉಂಟಾಗಿದ್ದ ಅಧಿಕ ವೇಗದ ಗಾಳಿಯು ಮುಂಗಾರು ತ್ವರಿತವಾಗಿ ದೇಶದ ವಿವಿಧ ಭಾಗಗಳನ್ನು ತಲುಪಲು ಕಾರಣವಾಗಿದೆ. ಮುಂಗಾರು ಮಳೆಯನ್ನು ಮುಂದಕ್ಕೆ ತಳ್ಳುವ ಅರಬಿ ಸಮುದ್ರದ ಪಶ್ಚಿಮ ಮಾರುತಗಳು ಅದು ಮಹಾರಾಷ್ಟ್ರದ ಮೇಲೆ ಬಂದಾಗ ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡ ವಲಯದ ರಚನೆಯೊಂದಿಗೆ ಮೇಳೈಸಿದ್ದವು, ಪರಿಣಾಮವಾಗಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಮಳೆಯಾಗಿದೆ. ಇದೇ ವೇಳೆ ಕಡಿಮೆ ಒತ್ತಡ ವಲಯವು ಗಾಳಿಯನ್ನು ದಿಲ್ಲಿ ಸೇರಿದಂತೆ ವಾಯುವ್ಯ ಭಾರತದತ್ತ ತಳ್ಳಿದ್ದು ಇದರಿಂದಾಗಿ ಎರಡೂ ಪ್ರದೇಶಗಳಲ್ಲಿ ಏಕಕಾಲಕ್ಕೆ ಮಳೆಯು ಆವರಿಸಿದೆ ಎಂದರು.

ಮುಂಗಾರು ಮಳೆಯ ಪ್ರವೇಶದ ಬಳಿಕ ಕಳೆದೆರಡು ದಿನಗಳಿಂದ ದೇಶದ ಹಲವಾರು ನಗರಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು,ಪ್ರವಾಹದಂತಹ ಸ್ಥಿತಿಗೆ ಸಾಕ್ಷಿಯಾಗುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News