2024ರ ಮುಂಗಾರು ಋತುವಿನಲ್ಲಿ ಐದು ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಅತಿವೃಷ್ಟಿ ಘಟನೆಗಳು : ವರದಿ

Update: 2024-10-19 15:29 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ : ಈ ವರ್ಷದ ಮುಂಗಾರು ಋತುವಿನಲ್ಲಿ ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಭಾರೀ ಮಳೆಯ ಘಟನೆಗಳು ದಾಖಲಾಗಿವೆ ಎಂದು ಸಲಹಾ ಸಂಸ್ಥೆ ಕ್ಲೈಮೇಟ್ ಟ್ರೆಂಡ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಹವಾಮಾನ ಬದಲಾವಣೆಯ ಪರಿಣಾಮಗಳು ಮುಂಗಾರು ಮಳೆಯ ಅವಧಿಯನ್ನು ಹೆಚ್ಚಿಸಿವೆ ಎಂದೂ ವರದಿಯು ಹೇಳಿದೆ.

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶಗಳನ್ನು ಉಲ್ಲೇಖಿಸಿರುವ ವರದಿಯು,ಈ ವರ್ಷ ದೀರ್ಘಾವಧಿ ಸರಾಸರಿ ಮಳೆಯ ಶೇ.108ರಷ್ಟು ನೈರುತ್ಯ ಮುಂಗಾರು ಮಳೆಯಾಗಿದೆ ಎಂದು ಹೇಳಿದೆ

ಕಳೆದ 50 ವರ್ಷಗಳಲ್ಲಿ ನಾಲ್ಕು ತಿಂಗಳುಗಳ ಮುಂಗಾರು ಋತುವಿನಲ್ಲಿ ಬಿದ್ದ ಮಳೆಯನ್ನು ಆಧರಿಸಿ ಸರಾಸರಿ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭಗೊಳ್ಳುತ್ತದೆ ಮತ್ತು ಸೆಪ್ಟಂಬರ್ ವೇಳೆಗೆ ಕಡಿಮೆಯಾಗುತ್ತದೆ.

ಜೂ.1 ಮತ್ತು ಸೆ.30ರ ನಡುವೆ ಭಾರತದಲ್ಲಿ 934.8 ಮಿಮೀ ಮಳೆಯಾಗಿದ್ದು, ಇದು ಋತುಮಾನದ 868.6 ಮಿಮೀ ವಾಡಿಕೆ ಮಳೆಗಿಂತ ಅಧಿಕವಾಗಿದೆ ಎಂದು ವರದಿಯು ತಿಳಿಸಿದೆ.

ಕ್ಲೈಮೇಟ್ ಟ್ರೆಂಡ್ಸ್ ವಿಶ್ಲೇಷಿಸಿದ 729 ಜಿಲ್ಲೆಗಳ ಪೈಕಿ 340 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ,158 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಮತ್ತು 48 ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗಿದೆ. ಆದರೆ 167 ಜಿಲ್ಲೆಗಳು ಮಳೆಯ ಕೊರತೆಯನ್ನು ಎದುರಿಸಿದ್ದು,11 ಜಿಲ್ಲೆಗಳು ಹೆಚ್ಚಿನ ಕೊರತೆಯನ್ನು ಅನುಭವಿಸಿವೆ.

24 ಗಂಟೆಗಳಲ್ಲಿ 204 ಮಿಮೀಗೂ ಅಧಿಕ ಮಳೆಯಾದರೆ ಅದನ್ನು ‘ಅತ್ಯಂತ ಭಾರೀ ಮಳೆ ಅಥವಾ ಅತಿವೃಷ್ಟಿ ’ಎಂದು ಪರಿಗಣಿಸಲಾಗುತ್ತದೆ ಮತ್ತು ಈ ವರ್ಷ ಇಂತಹ 2,632 ಘಟನೆಗಳು ದಾಖಲಾಗಿವೆ. 24 ಗಂಟೆಗಳಲ್ಲಿ 115 ಮಿಮೀ ಮತ್ತು 204 ಮಿಮೀ ನಡುವೆ ಮಳೆಯಾದರೆ ಅದನ್ನು‘ಭಾರೀ ಮಳೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ 473 ಘಟನೆಗಳು ದಾಖಲಾಗಿವೆ ಎಂದು ವರದಿಯು ತಿಳಿಸಿದೆ.

ಉತ್ತರದತ್ತ ಚಲಿಸುತ್ತಿದ್ದ ಹವಾಮಾನ ವ್ಯವಸ್ಥೆಗಳು ಕಳೆದ ಐದಾರು ವರ್ಷಗಳಲ್ಲಿ ಮಧ್ಯಭಾರತದ ಮೂಲಕ ಸಾಗುತ್ತಿವೆ ಎಂಬ ಐಎಂಡಿಯ ಮಾಜಿ ಮಹಾನಿರ್ದೇಶಕ ಕೆ.ಜೆ. ರಮೇಶ್ ಅವರ ಹೇಳಿಕೆಯನ್ನು ವರದಿಯು ಉಲ್ಲೇಖಿಸಿದೆ.

ಮಳೆಯ ಮಾದರಿಗಳಲ್ಲಿ ಬದಲಾವಣೆಗಳಿಗೆ ಜಾಗತಿಕ ತಾಪಮಾನ ಏರಿಕೆ ಹಾಗೂ ಎಲ್ ನಿನೋ, ಐಒಡಿ(ಇಂಡಿಯನ್ ಓಷನ್ ಡೈಪೋಲ್) ಮತ್ತು ಎಂಜೆಒ(ಮ್ಯಾಡನ್ ಜೂಲಿಯನ್ ಆಸಿಲೇಷನ್) ಕಾರಣವಾಗಿವೆ ಎಂದು ರಮೇಶ್ ಹೇಳಿದ್ದಾರೆ.

ಎಲ್ ನಿನೋ ವಿದ್ಯಮಾನವು ಪೂರ್ವ ಮತ್ತು ಮಧ್ಯ ಪೆಸಿಫಿಕ್‌ನಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಾಗುವುದನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಕೆಲವು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಇದನ್ನು ಬೆಳೆ ಹಾನಿ,ಅಗ್ನಿ ಅವಘಡಗಳು ಮತ್ತು ದಿಢೀರ್ ಪ್ರವಾಹಗಳೊಂದಿಗೆ ತಳುಕು ಹಾಕಲಾಗಿದೆ.

ಐಒಡಿ ಹಿಂದು ಮಹಾಸಾಗರದ ಆಫ್ರಿಕಾ ಸಮೀಪದ ಪಶ್ಚಿಮ ಭಾಗಗಳು ಮತ್ತು ಇಂಡೋನೇಷ್ಯಾ ಸಮೀಪದ ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನಗಳ ನಡುವಿನ ವ್ಯತ್ಯಾಸವಾಗಿದೆ. ಇದರ ಧನಾತ್ಮಕ ಸ್ಥಿತಿಗಳು ಭಾರತದಲ್ಲಿ ಉತ್ತಮ ಮಳೆಗೆ ಪೂರಕವಾಗಿವೆ.

ಎಂಜೆಒ ಹಿಂದು ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾರಗಳ ಮೇಲೆ ವಾತಾವರಣದ ಒತ್ತಡದಲ್ಲಿ ಬದಲಾವಣೆಗಳನ್ನುಂಟು ಮಾಡುವ ಹವಾಮಾನದ ಮಾದರಿಯಾಗಿದೆ. ಇದು ಕಡಿಮೆ ಮತ್ತು ಹೆಚ್ಚು ಒತ್ತಡದ ಪರ್ಯಾಯ ಪ್ರದೇಶಗಳನ್ನು ಸೃಷ್ಟಿಸುತ್ತದೆ,ಮಳೆಯ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ತಗ್ಗಿಸಬಹುದು ಮತ್ತು ಭೂಮಧ್ಯ ರೇಖೆಯುದ್ದಕ್ಕೂ ಪೂರ್ವದತ್ತ ಚಲಿಸುತ್ತದೆ.

ಒಂದರ ಹಿಂದೊಂದರಂತೆ ಹವಾಮಾನ ವ್ಯವಸ್ಥೆಗಳಿಂದಾಗಿ ಮುಂಗಾರು ಮಳೆಯ ಅವಧಿಯು ಹೆಚ್ಚಾಗಿದೆ ಎಂದು ರಮೇಶ್ ಅವರನ್ನು ಉಲ್ಲೇಖಿಸಿ ವರದಿಯು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News