ಆರು ದಿನ ಮುಂಚಿತವಾಗಿ ದೇಶಾದ್ಯಂತ ವ್ಯಾಪಿಸಿದ ಮುಂಗಾರು

Update: 2024-07-03 03:49 GMT

ಸಾಂದರ್ಭಿಕ ಚಿತ್ರ PC: PTI

ಹೊಸದಿಲ್ಲಿ: ನೈರುತ್ಯ ಮುಂಗಾರು ಮಂಗಳವಾರ ಇಡೀ ದೇಶವನ್ನು ವ್ಯಾಪಿಸಿದ್ದು, ವಾಡಿಕೆ ದಿನದಿಂದ ಆರು ದಿನ ಮುಂಚಿತವಾಗಿಯೇ ದೇಶಾದ್ಯಂತ ಹರಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸತತ ಮೂರನೇ ವರ್ಷ ಮುಂಗಾರು ಮಾರುತ ಜುಲೈ 2ರ ಮುನ್ನ ಇಡೀ ದೇಶವನ್ನು ವ್ಯಾಪಿಸಿದೆ.

ಸಾಮಾನ್ಯವಾಗಿ ಜೂನ್ 1 ರಿಂದ 5ರ ಅವಧಿಯಲ್ಲಿ ಕೇರಳದ ಇಡೀ ವಾಯವ್ಯ ಭಾಗಕ್ಕೆ ಆಗಮಿಸುವ ಮುಂಗಾರು ಈ ಬಾರಿ ಮೇ 30ರಂದೇ ತಲುಪಿತ್ತು. ಜೂನ್ 10-18ರ ಅವಧಿಯಲ್ಲಿ ನಿಧಾನ ಪ್ರಗತಿ ಕಂಡುಬಂದರೂ ಕೇವಲ 34 ದಿನಗಳಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ಸಾಮಾನ್ಯವಾಗಿ 38 ದಿನಗಳಲ್ಲಿ ಮುಂಗಾರು ಇಡೀ ದೇಶವನ್ನು ವ್ಯಾಪಿಸುತ್ತದೆ.

ಸಾಮಾನ್ಯ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ತ್ವರಿತ/ ವಿಳಂಬಿತ ಮುಂಗಾರು ಆಗಮನ ಅಥವಾ ವ್ಯಾಪಿಸುವಿಕೆ ಒಟ್ಟಾರೆ ಮಳೆ ಬೀಳುವ ಪ್ರಮಾಣದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಆದರೆ ಭತ್ತ, ಕಬ್ಬು, ಹತ್ತಿ ಮತ್ತು ಬೇಳೆ ಕಾಳುಗಳ ಬಿತ್ತನೆಯನ್ನು ಮುಂಗಾರು ನಿರ್ದೇಶಿಸುತ್ತದೆ. ಬಿತ್ತನೆ ಚಟುವಟಿಕೆಗಳು ಮತ್ತು ಬೆಳೆಗಳ ಆಯ್ಕೆ ಮೇಲೆಯೂ ಇದು ಪರಿಣಾಮ ಬೀರಲಿದ್ದು, ಆಯಾ ಬೆಳೆಗೆ ಅಗತ್ಯವಿರುವ ನೀರಾವರಿ ಆವರ್ತದ ಆಧಾರದಲ್ಲಿ ರೈತರು ಬೆಳೆಗಳನ್ನು ನಿರ್ಧರಿಸುತ್ತಾರೆ.

ಹವಾಮಾನ ಇಲಾಖೆ ಅಂಕಿ ಅಂಶಗಳ ಪ್ರಕಾರ ಕಳೆದ 12 ವರ್ಷಗಳಲ್ಲಿ ಏಳನೇ ಬಾರಿ, 25 ವರ್ಷಗಳಲ್ಲಿ 14ನೇ ಬಾರಿ ಇಡೀ ದೇಶವನ್ನು ವಾಡಿಕೆ ಅವಧಿಗಿಂತ ಮುನ್ನವೇ ವ್ಯಾಪಿಸಿದೆ. ಕುತೂಹಲಕಾರಿ ಅಂಶವೆಂದರೆ ಉತ್ತರಾಖಂಡದ ಕೇದಾರನಾಥ ಮೇಘಸ್ಫೋಟ ಸಂಭವಿಸಿದ 2013ರಲ್ಲಿ ಜೂನ್ 16ರ ವೇಳೆಗೇ ಮುಂಗಾರು ಇಡೀ ದೇಶವನ್ನು ವ್ಯಾಪಿಸಿತ್ತು.

ಸಾಮಾನ್ಯವಾಗಿ ಮುಂಗಾರು ಮಳೆ ಈಶಾನ್ಯ ಭಾರತದಿಂದ ಸೆಪ್ಟೆಂಬರ್ 17ರ ವೇಳೆಗೆ ಕಡಿಮೆಯಾಗಲಾರಂಭಿಸಿ ಅಕ್ಟೋಬರ್ 15ರ ವೇಳೆಗೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಕೃಷಿ ಚಟುವಟಿಕೆಗಳ ಜತೆಗೆ ಮುಂಗಾರು ಆರಂಭ ಹಾಗೂ ಅಂತ್ಯ ಮತ್ತು ವ್ಯಾಪಿಸುವಿಕೆ ದೇಶದ ಜಲವಿದ್ಯುತ್ ಯೋಜನೆಗಳ ನಿರ್ವಹಣೆ ಮೇಲೂ ಪರಿಣಾಮ ಬೀರುತ್ತದೆ.

ದೇಶದಲ್ಲಿ ಜೂನ್ ತಿಂಗಳಲ್ಲಿ ಶೇಕಡ 11ರಷ್ಟು ಮಳೆ ಆಭಾವ ಕಾಣಿಸಿಕೊಂಡಿದ್ದು, ಆದರೆ ಕಳೆದ ತಿಂಗಳ ಒಟ್ಟಾರೆ ಬಿತ್ತನೆ ಕಾರ್ಯಾಚರಣೆಗೆ ಇದರಿಂದ ಯಾವುದೇ ಧಕ್ಕೆಯಾಗಿಲ್ಲ. ಭಾರತ ಪರ್ಯಾಯದ್ವೀಪ ಪ್ರದೇಶದಲ್ಲಿ ಈ ಅವಧಿಯಲ್ಲಿ ವಾಡಿಕೆಗಿಂತ ಶೇಕಡ 14ರಷ್ಟು ಅಧಿಕ ಮಳೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News