‘ಕೆಲವು ದೋಷಿಗಳಿಗೆ ಹೆಚ್ಚು ಸವಲತ್ತು’: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ‘ವಿಡಂಬನೆ’
ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬದ 14 ಮಂದಿ ಸದಸ್ಯರ ಹತ್ಯೆ ಪ್ರಕರಣದ ದೋಷಿಗಳು ತಮ್ಮ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ ಸಮರ್ಥಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ‘‘ಕೆಲವು ಅಪರಾಧಿಗಳು ಇತರ ಕೆಲವರಿಗಿಂತ ಹೆಚ್ಚು ಸವಲತ್ತುಗಳನ್ನು ಪಡೆದಿದ್ದಾರೆ. ಅವರಿಗೆ ಜೈಲಿನಿಂದ ಹೊರಬರುವ ಅದೃಷ್ಟ ದೊರೆತಿದೆ’’ ಎಂದು ವಿಡಂಬನಾತ್ಮಕವಾಗಿ ಹೇಳಿದೆ.
ತಮ್ಮ ಜೈಲು ಶಿಕ್ಷೆ ರದ್ದತಿಯ ಆದೇಶವನ್ನು ವಜಾಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ದೋಷಿಗಳು ವಿರೋಧಿಸಿದ್ದು, ಈಗಾಗಲೇ ತಾವು 15 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದಾಗಿ ಹೇಳಿದ್ದಾರೆ.
ದೋಷಿಗಳ ಪರ ವಾದಿಸಿದ ಹಿರಿಯ ನ್ಯಾಯವಾದಿ ಸಿದ್ಧಾರ್ಥ ಲೂಥ್ರಾ ಅವರು ಆರೋಪಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸುವಾಗ ಅಪರಾಧದ ಸ್ವರೂಪವು ಪರಿಗಣನೆಗೆ ಬರುವುದಿಲ್ಲವೆಂದು ಸುಪ್ರೀಂಕೋರ್ಟ್ ನ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿದರು.
ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಂಡಿದೆ ಹಾಗೂ ಅವರು 15 ವರ್ಷಗಳ ಕಾಲ ಬಾಹ್ಯಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದರು ಎಂದು ಸಿದ್ಧಾರ್ಥ ಲೂಥ್ರಾ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, ಕೆಲವು ಕೈದಿಗಳಿಗೆ ಅವರ ಜೈಲು ಶಿಕ್ಷೆ ರದ್ದಾಗುವ ಸವಲತ್ತು ದೊರೆಯುತ್ತದೆ ಎಂದರು.
ಅಪರಾಧಿಗಳಿಗೆ ನ್ಯಾಯಾಲಯವು ಜೈಲು ಶಿಕ್ಷೆ ಘೋಷಿಸಿದ ಸಂದರ್ಭದಲ್ಲಿ ಅವರಿಗೆ ವಿಧಿಸಲಾಗಿದ್ದ ದಂಡವನ್ನು ಪಾವತಿಸದೆ ಇರುವುದು, ಅವರ ಜೈಲು ಶಿಕ್ಷೆ ರದ್ದತಿಯ ಮೇಲೆ ಪರಿಣಾಮ ಬೀರಲಾರದೆಂದು ಸಿದ್ಧಾರ್ಥ ಲೂಥ್ರಾ ವಾದಿಸಿದರು.
2002ರ ಗುಜರಾತ್ ಗಲಭೆ ಸಂದರ್ಭ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯು ಕುಟುಂಬದ 14 ಸದಸ್ಕರ ಕೊಲೆ ಪ್ರಕರಣದ 11ಆರೋಪಿಗ ಜೈಲು ಶಿಕ್ಷೆಯನ್ನು ಗುಜರಾತ್ ಸರಕಾರ ರದ್ದುಪಡಿಸಿ, ಬಿಡುಗಡೆಗೊಳಿಸಿರುವುದ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು.