2014ರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ 5,000ಕ್ಕೂ ಅಧಿಕ ಪ್ರಕರಣಗಳು ದಾಖಲು, 40ರಲ್ಲಿ ದೋಷನಿರ್ಣಯ: ಕೇಂದ್ರ ಸರಕಾರ
ಹೊಸದಿಲ್ಲಿ,ಆ.8: ಕಳೆದ ಹತ್ತು ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ 5,297 ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ 40 ಪ್ರಕರಣಗಳಲ್ಲಿ ದೋಷನಿರ್ಣಯವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಮಂಗಳವಾರ ಲೋಕಸಭೆಯಲ್ಲಿ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿಯವರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಸ್ವೀಕರಿಸಲಾದ ಮಾಹಿತಿಯ ಪ್ರಕಾರ 2014 ಮತ್ತು 2024ರ ನಡುವೆ ದಾಖಲಾದ ಪ್ರಕರಣಗಳ ಒಟ್ಟು ಸಂಖ್ಯೆ,ಖುಲಾಸೆಗಳು ಮತ್ತು ದೋಷನಿರ್ಣಯಗಳ ಕುರಿತು ವಿವರಗಳನ್ನು ಒದಗಿಸಿದರು.
2014 ಮತ್ತು 2024ರ ನಡುವೆ ಅನುಕ್ರಮವಾಗಿ 195,148,170,171,146,188,708,1,166,1,074,934 ಮತ್ತು 397 ಪ್ರಕರಣಗಳು ದಾಖಲಾಗಿದ್ದು,ನರೇಂದ್ರಮೋದಿ ಸರಕಾರವು 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಬಳಿಕ ಪಿಎಂಎಲ್‌ಎ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ. 2016ರಿಂದ ಕಾಯ್ದೆಯಡಿ 373 ಜನರನ್ನು ಬಂಧಿಸಲಾಗಿದ್ದು,ಹೆಚ್ಚಿನ ಬಂಧನಗಳು ಬಿಹಾರ(23),ಛತ್ತೀಸ್‌ಗಡ(22),ಜಾರ್ಖಂಡ್(53),ಕೇರಳ(13), ಮಹಾರಾಷ್ಟ್ರ(43),ಪ.ಬಂಗಾಳ (42) ಮತ್ತು ದಿಲ್ಲಿ(90)ಗಳಿಂದ ವರದಿಯಾಗಿವೆ.
2017ರಲ್ಲಿ ಇಬ್ಬರು ಮತ್ತು 2024ರಲ್ಲಿ ಓರ್ವರು ಪ್ರಕರಣಗಳಿಂದ ಖುಲಾಸೆಗೊಂಡಿದ್ದಾರೆ.
2014 ಮತ್ತು 2022ರ ನಡುವೆ ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆ (ಯುಪಿಪಿಎ) ಯಡಿ ಒಟ್ಟು 8,719 ಪ್ರಕರಣಗಳು ದಾಖಲಾಗಿದ್ದು,222 ಪ್ರಕರಣಗಳಲ್ಲಿ ದೋಷನಿರ್ಣಯವಾಗಿದ್ದು,567 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂದೂ ರಾಯ್ ತಿಳಿಸಿದರು.
ರಾಜ್ಯಸಭೆಯಲ್ಲಿ ಪ್ರತ್ಯೇಕ ಉತ್ತರದಲ್ಲಿ ಸಹಾಯಕ ವಿತ್ತ ಸಚಿವ ಪಂಕಜ ಚೌಧರಿಯವರು,ಕಳೆದ ಆರು ವರ್ಷಗಳಲ್ಲಿ ರಾಜಕೀಯ ನಾಯಕರ ಜೊತೆಗೆ ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ಒಟ್ಟು 132 ಪಿಎಂಎಲ್‌ಎ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಈ ಪೈಕಿ ನ್ಯಾಯಾಲಯದಲ್ಲಿ 2020ರಲ್ಲಿ ಒಂದು ಮತ್ತು 2023ರಲ್ಲಿ ಎರಡು ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ ಎಂದರು. ಒಂದು ಪ್ರಕರಣದಲ್ಲಿ ಮಾತ್ರ 2020ರಲ್ಲಿ ದೋಷನಿರ್ಣಯವಾಗಿದೆ.
ಕಾಯ್ದೆಯಡಿ 1.39 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ,ಸ್ತಂಭನಗೊಳಿಸಲಾಗಿದ ಅಥವಾ ಜಪ್ತಿ ಮಾಡಲಾಗಿದೆ ಎಂದೂ ಚೌಧರಿ ತಿಳಿಸಿದರು.