ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯ ಸಾಧ್ಯತೆ : ಐಎಂಡಿ
Update: 2024-05-27 15:31 GMT
ಹೊಸದಿಲ್ಲಿ : ಈ ಬಾರಿಯ ಮುಂಗಾರು ಋತುವಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರಾ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ದೀರ್ಘಕಾಲೀನ ಸರಾಸರಿಯ ಶೇ.106ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆಯಿದ್ದು,ಇದು ಶೇ.4ರಷ್ಟು ವ್ಯತ್ಯಾಸಗೊಳ್ಳಬಹುದು. ಸಮಗ್ರವಾಗಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಆಗಸ್ಟ್ ಮತ್ತು ಸೆಪ್ಟಂಬರ್ ನಡುವೆ ರೂಪುಗೊಳ್ಳಲಿರುವ ಪೂರಕ ಲಾ ನಿನಾ ಸ್ಥಿತಿಯಿಂದಾಗಿ ಈ ವರ್ಷ ವಾಡಿಕೆಗಿಂತ ಹಚ್ಚು ಮಳೆಯಾಗಲಿದೆ ಎಂದು ಇಲಾಖೆ ಈ ಹಿಂದೆ ಅಂದಾಜಿಸಿತ್ತು.
ದೇಶಾದ್ಯಂತ ಉಷ್ಣ ಅಲೆ ಮೇ 30ರಿಂದ ಕಡಿಮೆಯಾಗುವ ಸಾಧ್ಯತೆಯಿದೆ ಎಂದೂ ಐಎಂಡಿ ತಿಳಿಸಿದೆ. ಮುಂದಿನ ಮೂರು ದಿನಗಳ ಕಾಲ ವಾಯುವ್ಯ ಭಾರತದಲ್ಲಿ ಬಿಸಿಗಾಳಿಯ ಎಚ್ಚರಿಕೆಯನ್ನು ಅದು ನೀಡಿದೆ.