ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಸೆಳೆಯುತ್ತಿದೆ: ಮಧ್ಯಪ್ರದೇಶ ಕಾಂಗ್ರೆಸ್ ನಾಯಕನ ಆರೋಪ

Update: 2024-02-24 09:45 GMT

 ಸಜ್ಜನ್ ಸಿಂಗ್ ವರ್ಮ (Photo: PTI)

ಭೋಪಾಲ್: ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ನಾಯಕರನ್ನು ಸೆಳೆಯುವಂತೆ ಬಿಜೆಪಿ ತನ್ನ ನಾಯಕರಿಗೆ ಸೂಚನೆ ನೀಡಿದೆ ಎಂದು ಮಧ್ಯಪ್ರದೇಶದ ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮ ಆರೋಪಿಸಿದ್ದು, ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಇದು ಹತಾಶೆಯ ಪರಮಾವಧಿ ಎಂದು ವ್ಯಂಗ್ಯವಾಡಿದೆ.

ಶುಕ್ರವಾರ ರತ್ಲಮ್‌ನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ದೇವಾಸ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮ ಮೇಲಿನಂತೆ ಆರೋಪಿಸಿದ್ದಾರೆ.

"ಸರಪಂಚರು, ಪಂಚರು ಅಥವಾ ಇನ್ನಾವುದೇ ಕಾಂಗ್ರೆಸ್ ನಾಯಕರನ್ನು ಪಕ್ಷಾಂತರಗೊಳಿಸಲು ಪ್ರತಿ ಜಿಲ್ಲೆಯಲ್ಲೂ ಓರ್ವ ಪ್ರತಿನಿಧಿಯನ್ನು ಬಿಜೆಪಿ ನಿಯೋಜಿಸಿದೆ" ಎಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಸಜ್ಜನ್ ಸಿಂಗ್ ವರ್ಮ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ, "ಕಾಂಗ್ರೆಸ್ ಪಕ್ಷದ ಹಾಲಿ ಪರಿಸ್ಥಿತಿಯಲ್ಲಿ ವರ್ಮರ ಇಂತಹ ಹೇಳಿಕೆಗಳು ಸಹಜವಾಗಿವೆ. ನಾವು ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆವು. ಕೋಟ್ಯಂತರ ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಇತ್ತೀಚೆಗೆ ಕಮಲ್ ನಾಥ್ ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದಾಗ, ಅವರೊಂದಿಗೆ ಸಜ್ಜನ್ ಸಿಂಗ್ ವರ್ಮರ ಹೆಸರೂ ಕೇಳಿ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News