ಎಂಪಾಕ್ಸ್ ಆತಂಕ | ಕಟ್ಟೆಚ್ಚರ ವಹಿಸುವಂತೆ ವಿಮಾನ ನಿಲ್ದಾಣಗಳಿಗೆ ಕೇಂದ್ರದ ಸೂಚನೆ
ಹೊಸದಿಲ್ಲಿ : ಮಂಕಿ ಪಾಕ್ಸ್ (ಎಂಪಾಕ್ಸ್) ರೋಗಲಕ್ಷಣಗಳನ್ನು ಹೊಂದಿರುವ ಒಳಬರುವ ಪ್ರಯಾಣಿಕರ ಬಗ್ಗೆ ಕಟ್ಟೆಚ್ಚರವನ್ನು ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ವಿಮಾನ ನಿಲ್ದಾಣಗಳು ಹಾಗೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿಗಳಲ್ಲಿಯ ಲ್ಯಾಂಡ್ ಪೋರ್ಟ್ ಗಳಲ್ಲಿಯ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಆರೋಗ್ಯ ಸಚಿವಾಲಯವು ಯಾವುದೇ ಎಂಪಾಕ್ಸ್ ರೋಗಿಯ ಪ್ರತ್ಯೇಕತೆ,ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ದಿಲ್ಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆ, ಸಫ್ದರ್ಜಂಗ್ ಆಸ್ಪತ್ರೆ ಮತ್ತು ಲೇಡಿ ಹಾರ್ಡಿಂಜ್ ಆಸ್ಪತ್ರೆಗಳನ್ನು ನೋಡಲ್ ಕೇಂದ್ರಗಳನ್ನಾಗಿ ಗುರುತಿಸಿದೆ.
ತಮ್ಮ ವ್ಯಾಪ್ತಿಯಲ್ಲಿ ಇಂತಹ ನಿಯೋಜಿತ ಆಸ್ಪತ್ರೆಗಳನ್ನು ಗುರುತಿಸುವಂತೆ ಕೇಂದ್ರವು ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಕಳೆದ ವಾರ ಹೊಸ ಪ್ರಭೇದವು ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿನ ಎಂಪಾಕ್ಸ್ ಹರಡುವಿಕೆಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು.
ಜ.2023ರಲ್ಲಿ ಪ್ರಸ್ತುತ ಎಂಪಾಕ್ಸ್ ಪಿಡುಗು ಕಾಣಿಸಿಕೊಂಡಾಗಿನಿಂದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ 27,000 ಪ್ರಕರಣಗಳು ಮತ್ತು 1,100ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.