ʼಇವಿಎಂ ಅನ್‌ಲಾಕ್‌ʼ ಮಾಡಲು ಮೊಬೈಲ್ ಬಳಸಿದ ಶಿವಸೇನೆ ಸಂಸದನ ಸಂಬಂಧಿ: ಪ್ರಕರಣ ದಾಖಲು

Update: 2024-06-16 16:06 IST
ʼಇವಿಎಂ ಅನ್‌ಲಾಕ್‌ʼ ಮಾಡಲು ಮೊಬೈಲ್ ಬಳಸಿದ ಶಿವಸೇನೆ ಸಂಸದನ ಸಂಬಂಧಿ: ಪ್ರಕರಣ ದಾಖಲು

ರವೀಂದ್ರ ವಾಯ್ಕರ್ (Photo: Instagram/Ravindra Waikar)

  • whatsapp icon

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಯ ದಿನವಾದ ಜೂನ್ 4ರಂದು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದಲ್ಲಿ ನೂತನವಾಗಿ ಚುನಾಯಿತವಾಗಿರುವ ವಾಯುವ್ಯ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ವಾಯ್ಕರ್ ಅವರ ಸಂಬಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಾಯ್ಕರ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಗೋರೆಗಾಂವ್ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಬಳಸಿದ ಆರೋಪದ ಮೇಲೆ ವಾಯ್ಕರ್ ಅವರ ಭಾಮೈದುನ ಮಂಗೇಶ್ ಪಂಡಿಲ್ಕರ್ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

“ಚುನಾವಣಾ ಸಿಬ್ಬಂದಿ ದಿನೇಶ್ ಗೌರವ್ ನೀಡಿರುವ ದೂರಿನ ಮೇರೆಗೆ ಪಂಡಿಲ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಗಳಂಥ ಸಾಧನಗಳ ಬಳಕೆಗೆ ನಿಷೇಧವಿದ್ದರೂ, ಪಂಡಿಲ್ಕರ್ ಮೊಬೈಲ್ ಫೋನ್ ಅನ್ನು ಬಳಸುತ್ತಿರುವುದನ್ನು ಗಮನಿಸಿದ ಸ್ವತಂತ್ರ ಅಭ್ಯರ್ಥಿಯೊಬ್ಬರು ಈ ಕುರಿತು ಚುನಾವಣಾ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಯಾಗಿ, ಚುನಾವಣಾ ಅಧಿಕಾರಿಯು ವನ್ರೈ ಪೊಲೀಸರನ್ನು ಸಂಪರ್ಕಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಂಡಿಲ್ಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಅಧಿಕೃತ ಆದೇಶವನ್ನು ಉಲ್ಲಂಘಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಶಿವಸೇನೆಯ ಅಭ್ಯರ್ಥಿಯಾದ ರವೀಂದ್ರ ವಾಯ್ಕರ್ ಅವರು ವಾಯುವ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಕೇವಲ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ) ಬಣದ ನಾಯಕ ಆದಿತ್ಯ ಠಾಕ್ರೆ, “ಸಂಪೂರ್ಣವಾಗಿ ರಾಜಿಯಾಗಿರುವ ಚುನಾವಣಾ ಆಯೋಗವು ಮತ ಎಣಿಕೆ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲು ನಿರಾಕರಿಸುತ್ತಿದೆ. ಅದು ಮತ್ತೊಂದು ಚಂಡೀಗಢ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬುದು ನನ್ನ ಊಹೆಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News