ಮುಂಬೈ: ಗೇಟ್ ವೇ ಆಫ್ ಇಂಡಿಯಾ ಬಳಿ ಕುವೈತ್ ನಿಂದ ಬಂದಿದ್ದ ದೋಣಿಗೆ ತಡೆ, ಮೂವರು ವಶಕ್ಕೆ

Update: 2024-02-07 07:38 GMT

Photo credit: indiatoday.in

ಹೊಸದಿಲ್ಲಿ: ಮಂಗಳವಾರ ಸಂಜೆ ಮುಂಬೈ ಪೊಲೀಸರ ಗಸ್ತು ತಂಡವು ಗೇಟ್ ವೇ ಆಫ್ ಇಂಡಿಯಾ ಬಳಿ ಅರಬ್ಬೀ ಸಮುದ್ರದಲ್ಲಿ ಕುವೈತ್ ನಿಂದ ಬಂದಿದ್ದ ದೋಣಿಯೊಂದನ್ನು ಅಡ್ಡಗಟ್ಟಿದೆ. ಮೂರು ಮಂದಿ ಪ್ರಯಾಣಿಸುತ್ತಿದ್ದ ದೋಣಿಯನ್ನು ಅಡ್ಡಗಟ್ಟಿದ ನಂತರ, ಮುಂಬೈ ಪೊಲೀಸರು ಈ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

PTI ಸುದ್ದಿ ಸಂಸ್ಥೆ ಪ್ರಕಾರ, ದೋಣಿಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ.

ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಿವಾಸಿಗಳಾದ ಆ್ಯಂಟನಿ, ನಿಡಿಸೊ ಡಿಟೊ ಹಾಗೂ ವಿಜಯ್ ಆ್ಯಂಟನಿ ಎಂದು ಗುರುತಿಸಲಾಗಿದೆ. ಅವರೀಗ ಸದ್ಯ ಕಲಾಬಾ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದಾರೆ. ಆದರೆ, ಈವರೆಗೆ ಅವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.

ಸದ್ಯ, ಕುವೈತ್ ದೋಣಿಯನ್ನು ಗೇಟ್ ವೇ ಆಫ್ ಇಂಡಿಯಾ ಬಳಿ ಸುರಕ್ಷಿತವಾಗಿ ಲಂಗರು ಹಾಕಲಾಗಿದ್ದು, ಅರಬ್ಬೀ ಸಮುದ್ರದಿಂದ ಭಾರತದ ಜಲಪ್ರದೇಶಕ್ಕೆ ಈ ದೋಣಿ ಪ್ರವೇಶಿಸಿರುವ ಸನ್ನಿವೇಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ವಶದಲ್ಲಿರುವ ಆರೋಪಿಗಳ ಪ್ರಕಾರ, ತಾವು ಮೀನುಗಾರಿಕೆ ಕಂಪನಿಯೊಂದರಲ್ಲಿ ದುಡಿಯುತ್ತಿದ್ದೆವು ಹಾಗೂ ನಾವು ಆ ಕಂಪನಿಯ ಮಾಲಕರ ಕಿರುಕುಳ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸಿದ್ದೆವು ಎಂದು ಹೇಳಿದ್ದಾರೆ. ಕಠಿಣ ಕೆಲಸದ ವಾತಾವರಣದೊಂದಿಗೆ ಬಾಕಿ ಮೊತ್ತ ಹಾಗೂ ವೇತನವನ್ನು ಪಾವತಿ ಮಾಡದೆ ಇದ್ದುದರಿಂದ ನಾವು ಆ ಕಂಪನಿಯ ಮಾಲಕರ ದೋಣಿಯನ್ನು ಅಪಹರಿಸಿದೆವು ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News