ಮುಸ್ಲಿಂ ವ್ಯಕ್ತಿಯನ್ನು ಥಳಿಸಿ 'ಜೈ ಶ್ರೀ ರಾಮ್' ಹೇಳುವಂತೆ ಬಲವಂತಪಡಿಸಿದ ದುಷ್ಕರ್ಮಿಗಳು
ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಸುಭಾಶ್‌ನಗರ್ ಎಂಬಲ್ಲಿ 32 ವರ್ಷದ ಮುಸ್ಲಿಂ ವ್ಯಕ್ತಿಗೆ ಕತ್ತಿ, ದೊಣ್ಣೆ ಮತ್ತು ಕಬ್ಬಿಣದ ರಾಡುಗಳಿಂದ ಅಮಾನುಷವಾಗಿ ಹಲ್ಲೆಗೈದ ಕಿಡಿಗೇಡಿಗಳ ಗುಂಪೊಂದು ಆತನಿಗೆ 'ಜೈ ಶ್ರೀ ರಾಮ್' ಹೇಳುವಂತೆ ಬಲವಂತಪಡಿಸಿದ ಘಟನೆ ನಡೆದಿದೆ.
ಜೈಪುರ್: ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಸುಭಾಶ್‌ನಗರ್ ಎಂಬಲ್ಲಿ 32 ವರ್ಷದ ಮುಸ್ಲಿಂ ವ್ಯಕ್ತಿಗೆ ಕತ್ತಿ, ದೊಣ್ಣೆ ಮತ್ತು ಕಬ್ಬಿಣದ ರಾಡುಗಳಿಂದ ಅಮಾನುಷವಾಗಿ ಹಲ್ಲೆಗೈದ ಕಿಡಿಗೇಡಿಗಳ ಗುಂಪೊಂದು ಆತನಿಗೆ 'ಜೈ ಶ್ರೀ ರಾಮ್' ಹೇಳುವಂತೆ ಬಲವಂತಪಡಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು thehindu.com ವರದಿ ಮಾಡಿದೆ.
ಎಂದಿನಂತೆ ಜುಲೈ 4ರಂದು ಮನೆ ಸಮೀಪದ ಅಂಗಡಿಗೆ ಸಂಜೆ 7 ಗಂಟೆಗೆ ಹಾಲು ಖರೀದಿಸಲೆಂದು ತೆರಳಿದ ವ್ಯಕ್ತಿಯನ್ನು ಏಳು ಜನರ ತಂಡವೊಂದು ನಿಲ್ಲಿಸಿ, ಧರ್ಮವನ್ನು ನಿಂದಿಸಿ ಜೈ ಶ್ರೀ ರಾಮ್ ಹೇಳುವಂತೆ ಬಲವಂತಪಡಿಸಿತ್ತೆಂದು ದೂರಲಾಗಿದೆ. ಭಯಭೀತನಾದ ವ್ಯಕ್ತಿ ನಂತರ ಮನೆಗೆ ಧಾವಿಸಿದ್ದರು.
ಈ ಘಟನೆ ನಡೆದು ನಾಲ್ಕು ದಿನಗಳ ನಂತರ ಮನೆಮಂದಿಯ ಸಲಹೆಯಂತೆ ಬೆಳಿಗ್ಗೆ 10 ಗಂಟೆಗೆ ಅಂಗಡಿಗೆ ತೆರಳಿ ಹಾಲು ಖರೀದಿಸುವಷ್ಟರಲ್ಲಿ ಕಿಡಿಗೇಡಿಗಳ ಪೈಕಿ ಒಬ್ಬಾತ ಅಲ್ಲಿದ್ದು ಈತನನ್ನು ತಡೆದು ನಿಂದಿಸಲು ಆರಂಭಿಸಿದ್ದ. ನಂತರ ಕಿಡಿಗೇಡಿಗಳು ಈ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದು ಆ ಸಂದರ್ಭ ಸುತ್ತ ಇದ್ದ ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆಂದು ಸಂತ್ರಸ್ತ ಹೇಳಿದ್ದಾರೆ.
ಈ ಘಟನೆ ಸಂಬಂಧ ಮುಕೇಶ್ ಗುರ್ಜರ್, ಶಿವ ಗುರ್ಜರ್ ಮತ್ತಿತರ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತ ಈಗ ಆಸ್ಪತ್ರೆಯಲ್ಲಿದ್ದು ಆತನ ಕುಟುಂಬ ಭಯದಿಂದ ಎರಡು ದಿನಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಸಂತ್ರಸ್ತ ತನ್ನ ಅಸೌಖ್ಯಪೀಡಿತ ತಾಯಿ, ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದ.
ಸಂತ್ರಸ್ತ ಮತ್ತು ಆರೋಪಿಗಳ ನಡುವೆ ಜಗಳ ನಡೆದಿದೆ ಎಂದು ಹೇಳಲಾಗಿದೆಯಾದರೂ ವಿಚಾರಣೆ ವೇಳೆ ಆರೋಪಿಗಳು ತಮಗೆ ಸಂತ್ರಸ್ತನ ಗುರುತು ತಿಳಿದಿಲ್ಲ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.