ಭೂಕುಸಿತ ಪೀಡಿತ ವಯನಾಡಿನಲ್ಲಿ ನಿಗೂಢ ಶಬ್ದ | ಆತಂಕದಲ್ಲಿ ನಿವಾಸಿಗಳು
ವಯನಾಡ್ : ಭೂಕುಸಿತ ಸಂಭವಿಸಿದ ವಯನಾಡ್‌ನ ಅಂಬಲವಯಲ್-ಎಡಕ್ಕಲ್ ವಲಯದಲ್ಲಿ ಶುಕ್ರವಾರ ನಿಗೂಡ ಶಬ್ದ ಕೇಳಿ ಬಂದಿದ್ದು, ಇದು ಅಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.
ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್‌ಮಲ-ಮುಂಡಕ್ಕೈ ವಲಯಗಳಿಂದ ಸುಮಾರು 15ರಿಂದ 20 ಕಿ.ಮೀ. ದೂರದಲ್ಲಿರುವ ಅಂಬಲವಯಲ್-ಎಡಕ್ಕಲ್ ವಲಯಗಳಲ್ಲಿ ಬೆಳಗ್ಗೆ ಸುಮಾರು 10.15ಕ್ಕೆ ನಿಗೂಢ ಶಬ್ದ ಕೇಳಿ ಬಂದಿದೆ. ನೆರೆಯ ಕೋಝಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲೆಗಳಲ್ಲಿ ಕೂಡ ಇದೇ ರೀತಿಯ ಸದ್ದು ಕೇಳಿ ಬಂದಿರುವುದು ವರದಿಯಾಗಿದೆ.
ಅಂಬಲವಯಲ್-ಎಡಕ್ಕಲ್ ವಲಯಗಳ ಜನರು ಈ ಸದ್ದು ಕೇಳಿ ತಮ್ಮ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹಲವು ಕುಟುಂಬಗಳು ಈ ವಲಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಆರಂಭದಲ್ಲಿ ಹಲವರು ಇದು ಗುಡುಗಿನ ಶಬ್ದವಾಗಿರಬಹುದು ಎಂದು ಭಾವಿಸಿದ್ದರು ಎಂದು ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಶಬ್ದ ಭೂಮಿ ಅಡಿಯಿಂದ ಕೇಳಿ ಬಂದಿದೆ ಎಂದು ಹೇಳಲಾಗಿದೆ. ಕೆಲವರಿಗೆ ಮನೆಯ ಕಿಟಕಿಯ ಬಾಗಿಲುಗಳು ಕಂಪಿಸಿದ ಅನುಭವವಾಗಿದೆ.
ಭೂಕುಸಿತದ ಗಂಭೀರತೆಯನ್ನು ಮೌಲ್ಯ ಮಾಪನ ಮಾಡಲು ಕೇಂದ್ರದ ತಜ್ಞರ ತಂಡ ಈಗಾಗಲೇ ವಯನಾಡ್ ವಲಯಕ್ಕೆ ಭೇಟಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ. ಆದುದರಿಂದ ಈ ಪ್ರದೇಶದಲ್ಲಿ ಈಗಾಗಲೇ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಭೂಕಂಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಹಾಗೂ ಅಲ್ಲಿ ಏನಾದರೂ ವೈಪರಿತ್ಯಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚಲು ಸ್ಥಳೀಯ ತಜ್ಞರಿಗೆ ಸೂಚಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.
ಭೂಕಂಪನ ದಾಖಲೆ ಚಲನೆಯ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಅದು ಹೇಳಿದೆ. ಸಂತ್ರಸ್ತ ಪ್ರದೇಶಗಳಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.