ನರೇಂದ್ರ ಮೋದಿ ರಾಜಕೀಯ ಇತಿಹಾಸ ಹಿಂದೂ-ಮುಸ್ಲಿಂ ವಿವಾದ ಆಧರಿಸಿದೆ : ದಿಗ್ವಿಜಯ ಸಿಂಗ್
ರಾಜಗಢ : ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸ ‘‘ಹಿಂದೂ-ಮುಸ್ಲಿಂ ವಿವಾದ’’ವನ್ನು ಆಧರಿಸಿದೆ. ಇದರಿಂದ ಯಾರಿಗೆ ಲಾಭವಾಗಿದೆ ಹಾಗೂ ಯಾರಿಗೆ ನಷ್ಟವಾಗಿದೆ ಎಂಬುದನ್ನು ಮೋದಿ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪ್ರತಿಪಾದಿಸಿದ್ದಾರೆ.
ಮಧ್ಯಪ್ರದೇಶದ ರಾಜಗಢ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿಗ್ವಿಜಯ್ ಸಿಂಗ್, ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಿಂದ ತನಗೆ ಸಮಾಧಾನವಾಗಿಲ್ಲ ಎಂದು ಹೇಳಿದ್ದಾರೆ.
ರಾಜಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಘೋಗಢ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಸಿಂಗ್ ಅವರು ಪಿಟಿಐಯೊಂದಿಗೆ ಮಾತನಾಡಿದರು. ‘‘ನೈಜ ಸಮಸ್ಯೆಗಳ ಆಧಾರದಲ್ಲಿ ಎಲ್ಲಿ ಚುನಾವಣೆ ನಡೆಸಲಾಗುತ್ತಿದೆ? ಪಿತ್ರಾರ್ಜಿತ ತೆರಿಗೆಯಂತಹ ವಿಷಯಗಳ ಕುರಿತಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಮುಸ್ಲಿಮರಿಗೆ ನೀಡಲು ಒಬಿಸಿ ಮೀಸಲಾತಿಯನ್ನು ಕಿತ್ತುಕೊಳ್ಳಲು ಹಾಗೂ ಒಳನುಸುಳುಕೋರರಿಗೆ ಸಂಪತ್ತನ್ನು ಮರು ಹಂಚಿಕೆ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಅದು ಆರೋಪಿಸಿದೆ’’ ಎಂದು ಅವರು ಹೇಳಿದರು.
‘‘ಗುಜರಾತ್ ಅಭಿವೃದ್ಧಿ ಮಾದರಿ’’ ಕುರಿತು ತರಾಟೆಗೆ ತೆಗೆದುಕೊಂಡ ದಿಗ್ವಿಜಯ್ ಸಿಂಗ್, ‘‘ನೀವು ಗುಜರಾತ್ ನ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ಡಿಐ)ವನ್ನು ಗಮನಿಸಿದರೆ, ಅದು ದೇಶದ ಟಾಪ್ 10 ರಾಜ್ಯಗಳಲ್ಲಿ ಸ್ಥಾನವನ್ನೇ ಪಡೆದಿಲ್ಲ. ಹಾಗಿದ್ದರೆ, ಗುಜರಾತ್ ಮಾದರಿ ಎಂದರೆ ಏನು?’’ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ‘‘ಈ ಬಾರಿ 400ಕ್ಕೂ ಅಧಿಕ’’ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಅವರು, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿಖರವಾಗಿ ಗೆಲ್ಲುವ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಊಹಿಸಲು ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ನೀವು 2014 ಹಾಗೂ 2019ರ ಚುನಾವಣೆಯ ಅಂಕಿ-ಅಂಶವನ್ನು ಗಮನಿಸಿದರೆ, ಅವರು ಯಾವ ಅಂಕಿ-ಅಂಶವನ್ನು ನೀಡಿದ್ದಾರೋ, ಅದನ್ನು ದಾಟಿದ್ದಾರೆ. 2014ರಲ್ಲಿ ಅವರು ‘‘272ಕ್ಕೂ ಅಧಿಕ’’ ಎಂಬ ಘೋಷಣೆ ಮಾಡಿದರು ಹಾಗೂ 284 ಸ್ಥಾನಗಳನ್ನು ಗೆದ್ದರು. 2019ರಲ್ಲಿ ‘‘300ಕ್ಕೂ ಅಧಿಕ’’ ಎಂಬ ಘೋಷಣೆ ಮಾಡಿದರು ಹಾಗೂ 303 ಸ್ಥಾನಗಳನ್ನು ಗೆದ್ದರು’’ ಎಂದು ಅವರು ಹೇಳಿದರು.
ಬಿಜೆಪಿಯ ಚುನಾವಣಾ ಯಶಸ್ಸಿನಲ್ಲಿ ಇವಿಎಂಗಳ ಪಾತ್ರವಿದೆ ಎಂಬುದನ್ನು ನಾನು ನಂಬುತ್ತೇನೆ. ಇವಿಎಂಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಇತ್ತೀಚೆಗಿನ ತೀರ್ಪಿನ ಬಗ್ಗೆ ಅಸಮಾಧಾನವಿದೆ. ಈ ಬಗ್ಗೆ ಚುನಾವಣೆ ಮುಗಿದ ಬಳಿಕ ಮಾತನಾಡುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.