ಜಮ್ಮು: ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಜಮ್ಮು: ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸಂಚರಿಸುತ್ತಿದ್ದ ಸ್ಕಾರ್ಪಿಯೋ ವಾಹನ ಮತ್ತು ಕಾರೊಂದು ಇಂದು ಅಪರಾಹ್ನ ಪರಸ್ಪರ ಢಿಕ್ಕಿಯಾದ ಘಟನೆಯಲ್ಲಿ ಮೆಹಬೂಬಾ ಅವರು ಪವಾಡಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅಪಘಾತವು ಅನಂತ್‌ನಾಗ್ ಜಿಲ್ಲೆಯ ಸಂಗಂ ಎಂಬಲ್ಲಿ ನಡೆದಿದೆ. ಮೆಹಬೂಬಾ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋದ ಬಾನೆಟ್ ಢಿಕ್ಕಿಯ ರಭಸಕ್ಕೆ ನುಜ್ಜುಗುಜ್ಜಾಗಿದೆ.
ಅಗ್ನಿ ಅವಘಡವೊಂದರ ಸಂತ್ರಸ್ತರನ್ನು ಭೇಟಿಯಾಗಲು ಅವರು ಖಾನಾಬಲ್ ಎಂಬಲ್ಲಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರ ಭದ್ರತಾ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೆಹಬೂಬಾ ಅವರ ಪುತ್ರಿ ಇಲ್ತಿಜಾ ಈ ಅಪಘಾತದ ಬಗ್ಗೆ ಟ್ವೀಟ್ ಮಾಡಿದ್ದಾರೆ ಹಾಗೂ “ದೇವರ ದಯೆಯಿಂದ ಮೆಹಬೂಬಾ ಮತ್ತು ಅವರ ಭದ್ರತಾ ಅಧಿಕಾರಿಗಳು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ,” ಎಂದು ಬರೆದಿದ್ದಾರೆ.
ಅಪಘಾತದ ನಂತರ ಮೆಹಬೂಬಾ ಮುಫ್ತಿ ಅವರು ಬೇರೊಂದು ವಾಹನದಲ್ಲಿ ತಮ್ಮ ನಿಗದಿತ ಭೇಟಿಗೆ ತೆರಳಿದರು.