‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಗಣತಿ: ರಾಹುಲ್ ಗಾಂಧಿ
ರಾಂಚಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು ಮತ್ತು 50 ಶೇಕಡ ಮೀಸಲಾತಿ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅದೇ ವೇಳೆ, ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬುಡಕಟ್ಟು ಸಮಯದಾಯಕ್ಕೆ ಸೇರಿದವರಾದುದರಿಂದ ಅವರ ನೇತೃತ್ವದ ಜೆಎಮ್ಎಮ್-ಕಾಂಗ್ರೆಸ್-ಆರ್ಜೆಡಿ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿತ್ತು ಎಂದು ಅವರು ಆರೋಪಿಸಿದರು.
‘‘ಮೈತ್ರಿಕೂಟದ ಎಲ್ಲಾ ಶಾಸಕರು ಮತ್ತು ಸೊರೇನ್ರನ್ನು ನಾನು ಅಭಿನಂದಿಸುತ್ತೇನೆ. ಅವರು ಬಿಜೆಪಿ-ಆರೆಸ್ಸೆಸ್ ಪಿತೂರಿಯನ್ನು ವಿಫಲಗೊಳಿಸಿ ಬಡವರ ಸರಕಾರವನ್ನು ರಕ್ಷಿಸಿದರು’’ ಎಂದು ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ರಾಂಚಿಯ ಶಹೀದ್ ಮೈದಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ದಲಿತರು, ಬುಡಕಟ್ಟು ಜನರು, ಇತರ ಹಿಂದುಳಿದ ವರ್ಗಗಳ ಜನರನ್ನು ಜೀತದಾಳುಗಳನ್ನಾಗಿ ಮಾಡಲಾಗಿದೆ. ದೊಡ್ಡ ಕಂಪೆನಿಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಅವರಿಗೆ ಪ್ರಾತಿನಿಧ್ಯವೇ ಇಲ್ಲ’’ ಎಂದು ಅವರು ಹೇಳಿದರು.
‘‘ಇದು ಭಾರತದ ಎದುರು ಇರುವ ದೊಡ್ಡ ಪ್ರಶ್ನೆಯಾಗಿದೆ. ಮೊದಲ ಮೊದಲ ಕೆಲಸ ದೇಶಾದ್ಯಂತ ಜಾತಿ ಗಣತಿ ನಡೆಸುವುದು’’ ಎಂದು ರಾಹುಲ್ ನುಡಿದರು.