ಗರ್ಬಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಪುರುಷರ ಉಪಸ್ಥಿತಿ ಕುರಿತು ‘ನವಭಾರತ್ ಟೈಮ್ಸ್ ನೌ’ ವಾಹಿನಿಯ 2022 ವೀಡಿಯೋ ತೆಗೆದುಹಾಕುವಂತೆ ಆದೇಶ
ಹೊಸದಿಲ್ಲಿ: ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರವು ಟೈಮ್ಸ್ ನೌ ನವಭಾರತ್ ಸುದ್ದಿ ವಾಹಿನಿಗೆ ಆದೇಶವನ್ನು ನೀಡಿ ಗರ್ಬಾ ಕಾರ್ಯಕ್ರಮಗಳ ಸ್ಥಳಗಳಿಗೆ ಮುಸ್ಲಿಂ ಪುರುಷರ ಪ್ರವೇಶ ಕುರಿತ ಸೆಪ್ಟೆಂಬರ್ 2022ರ ವೀಡಿಯೋವನ್ನು ತೆಗೆದುಹಾಕುವಂತೆ ಹೇಳಿದೆ. ಈ ಕಾರ್ಯಕ್ರಮವು ಕೋಮು ಬಣ್ಣ ಹೊಂದಿರುವುದಕ್ಕಾಗಿ ಈ ಆದೇಶ ನೀಡಲಾಗಿದೆ.
ಸುದ್ದಿ ವಾಹಿನಿಯ ಈ ಕಾರ್ಯಕ್ರಮವು ಇಡೀ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿದೆ ಹಾಗೂ ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳು ದೂರು ನೀಡಿದ್ದರು.
ಗರ್ಬಾ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸುವ ದೃಶ್ಯವಿರುವ ಈ ಕಾರ್ಯಕ್ರವನ್ನು ಸೆಪ್ಟೆಂಬರ್ 29, 2022 ರಂದು ಪ್ರಸಾರ ಮಾಡಲಾಗಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸುರಕ್ಷತೆಯತ್ತ ಗಮನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು ಹಾಗೂ ಗರ್ಬಾ ಕಾರ್ಯಕ್ರಮದಲ್ಲಿ ಪುರುಷರು ತೆಗೆದ ಮಹಿಳೆಯರ ಅನುಚಿತ ಫೋಟೋಗಳನ್ನೂ ಉಲ್ಲೇಖಿಸಿತ್ತು.
ಕಾರ್ಯಕ್ರಮದ ಆಂಕರ್ ನಾವಿಕಾ ಕುಮಾರ್ ಅವರು “ಮುಸ್ಲಿಮರು ಹಿಂದೂಗಳ ಬೇರೆ ಹಬ್ಬಗಳಲ್ಲಿ ಏಕೆ ಭಾಗವಹಿಸುವುದಿಲ್ಲ, ಅವರಿಗೆ ಗರ್ಬಾ ಮಾತ್ರ ಏಕೆ ಇಷ್ಟ?” ಎಂಬ ಆಧಾರರಹಿತ ಪ್ರಶ್ನೆಯನ್ನೂ ಕೇಳಿದ್ದರು. “ಕೆಲ ವ್ಯಕ್ತಿಗಳು ನಡೆಸಿದ್ದರೆನ್ನಲಾದ ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸಿ ದ್ವೇಷದ ಬೀಜ ಬಿತ್ತುವ ಕೆಲಸ ಮಾಡಲಾಗಿದೆ,” ಎಂದೂ ದೂರುದಾರರು ಆರೋಪಿಸಿದ್ದಾರೆ.
ಈ ಕಾರ್ಯಕ್ರಮ ಕೇವಲ ಮಹಿಳೆಯರ ಸುರಕ್ಷತೆ ವಿಚಾರದತ್ತ ಗಮನ ಹರಿಸಿದ್ದರೆ ಸಮಸ್ಯೆಯಿರಲಿಲ್ಲ ಆದರೆ ಅದಕ್ಕೊಂದು ಮತೀಯ ಬಣ್ಣ ನೀಡುವ ಯತ್ನ ನಡೆಸಲಾಗಿದೆ ಎಂದು ಹೇಳಿದ ಪ್ರಾಧಿಕಾರ ಈ ವೀಡಿಯೋ ತೆಗೆದುಹಾಕುವಂತೆ ಸೂಚನೆ ನೀಡಿದೆ.