ನೌಕಾಪಡೆ ಹಡಗಿನಿಂದ ಯೋಧ ಕಣ್ಮರೆ: ಸಿಬಿಐ ತನಿಖೆಗೆ ಆಗ್ರಹ
ಜಮ್ಮು: ಭಾರತೀಯ ನೌಕಾಪಡೆಯ ಹಡಗಿನಲ್ಲಿ ಕರ್ತವ್ಯದಲ್ಲಿದ್ದ ವ್ಯಕ್ತಿ ಫೆಬ್ರವರಿ 27ರಂದು ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕಣ್ಮರೆಯಾಗಿರುವ ಯೋಧ ಸಾಹಿಲ್ ವರ್ಮಾ ಅವರ ಪೋಷಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ನೌಕಾಪಡೆಯ ಹಡಗಿನಿಂದ ಯೋಧನೊಬ್ಬ ಕಣ್ಮರೆಯಾಗಿರುವುದು ಮತ್ತು ಇನ್ನೂ ಪತ್ತೆಯಾಗದಿರುವುದು ಅಚ್ಚರಿಯ ವಿಚಾರ. ಹಡಗಿನಿಂದ ಯಾರೂ ಬಿದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ ಎಂದು ನನಗೆ ತಿಳಿಸಿದ್ದಾರೆ. ಹಾಗಾದರೆ ನಮ್ಮ ಮಗ ಏನಾದ" ಎಂದು ಯೋಧನ ತಂದೆ ಸುಭಾಷ್ಚಂದ್ರ ಅವರು ಪ್ರಶ್ನಿಸಿದ್ದಾರೆ.
ಮಗನ ಸುರಕ್ಷಿತ ವಾಪಸಾತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹಸಚಿವ ಅಮಿತ್ ಶಾ ಹಾಗೂ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಾಗರಯಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾಹಿಲ್ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣದ ಸಂಬಂಧ ನೌಕಾಪಡೆ ಅಧಿಕಾರಿಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ವಿಮಾನ ಹಾಗೂ ಹಡಗಿನ ಮೂಲಕ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ಬಗ್ಗೆ ತನಿಖೆಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಮುಂಬೈನಲ್ಲಿರುವ ಪಶ್ಚಿಮ ನೌಕಾಪಡೆ ಕಮಾಂಡ್ ಶನಿವಾರ ಟ್ವೀಟ್ ಮಾಡಿತ್ತು.