ಕೇಂದ್ರ ಸಚಿವ ಸಂಪುಟದ ಶೇ 99ರಷ್ಟು ಸಚಿವರು ಕೋಟ್ಯಾಧಿಪತಿಗಳು
ಹೊಸದಿಲ್ಲಿ: ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವ ಸಂಪುಟದ 70 ಸದಸ್ಯರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ತನ್ನ ವರದಿಯೊಂದರಲ್ಲಿ ತಿಳಿಸಿದೆ.
ಕೇಂದ್ರ ಸಚಿವ ಸಂಪುಟದ 72 ನೂತನ ಸಚಿವರ ಪೈಕಿ 71 ಮಂದಿಯ ಅಫಿಡವಿಟ್‌ಗಳನ್ನು ಪರಿಶೀಲಿಸಿ ಎಡಿಆರ್ ವರದಿ ಹೊರತಂದಿದೆ. ಲೋಕಸಭಾ ಚುನಾವಣೆ ಸ್ಪರ್ಧಿಸದೇ ಇದ್ದ ಬಿಜೆಪಿ ನಾಯಕ ಜಾರ್ಜ್ ಕುರಿಯನ್ ಅವರ ಅಫಿಡವಿಟ್ ಅನ್ನು ಪರಿಶೀಲಿಸಿಲ್ಲ ಎಂದು ಎಡಿಆರ್ ಹೇಳಿದೆ.
ಉಳಿದಂತೆ 71ರಲ್ಲಿ 70 ಸಚಿವರು ಅಂದರೆ ಶೇ99ರಷ್ಟು ಮಂದಿ ಬಳಿ ರೂ. 1 ಕೋಟಿಗಿಂತಲೂ ಅಧಿಕ ಮೌಲ್ಯದ ಸಂಪತ್ತು ಇದ್ದರೆ, ಆರು ಸಚಿವರು ರೂ. 100 ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಇರುವ ಬಗ್ಗೆ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ರೂ. 5,705 ಕೋಟಿಗೂ ಅಧಿಕ ಮೌಲ್ಯದ ಸಂಪತ್ತಿನೊಂದಿಗೆ ಆಂಧ್ರದ ಗುಂಟೂರಿನ ಟಿಡಿಪಿ ನಾಯಕ ಚಂದ್ರ ಶೇಖರ್ ಪೆಮ್ಮಸನಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ.
ಸಂವಹನ ಮತ್ತು ಈಶಾನ್ಯ ಪ್ರಾಂತ್ಯ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೂ. 424 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಖಾತೆಯ ಸಚಿವ ಎಚ್ ಡಿ ಕುಮಾರಸ್ವಾಮಿ ತಮ್ಮ ರೂ. 217 ಕೋಟಿಗೂ ಅಧಿಕ ಮೌಲ್ಯದ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರೂ. 144 ಕೋಟಿ ಮೌಲ್ಯದ ಸಂಪತ್ತು ಘೋಷಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶ್ರೀಮಂತ ಸಚಿವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಅಂಕಿಅಂಶಗಳ ಮತ್ತು ಕಾರ್ಯಕ್ರಮ ಅನುಷ್ಠಾನ ರಾಜ್ಯ ಸಚಿವರಾಗಿರುವ ಗುರ್ಗಾಂವ್ ಸಂಸದ ರಾವ್ ಇಂದರ್‌ಜಿತ್ ಸಿಂಗ್ ರೂ. 121 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಐದನೇ ಸ್ಥಾನದಲ್ಲಿದ್ದರೆ ರೂ. 110 ಕೋಟಿಗೂ ಅಧಿಕ ಸಂಪತ್ತು ಘೋಷಿಸಿರುವ ವಾಣಿಜ್ಯ ಸಚಿವ ಪಿಯೂಶ್ ಗೋಯೆಲ್ ಆರನೇ ಸ್ಥಾನದಲ್ಲಿದ್ದಾರೆ.
ವರದಿಯ ಪ್ರಕಾರ ಒಟ್ಟು 71 ಸಚಿವರು ಸರಾಸರಿ ರೂ 107.94 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ.
ಕ್ರಿಮಿನಲ್ ಪ್ರಕರಣಗಳು:
ಎಡಿಆರ್ ವರದಿ ಪ್ರಕಾರ ಶೇ 31ರಷ್ಟು ಹೊಸ ಸಚಿವರು ಅಂದರೆ, 28 ಮಂದಿ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ 19 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಸಚಿವರಾಗಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರಾದ ಶಂತನು ಠಾಕುರ್ ಮತ್ತು ಸುಕಂತ ಮಜೂಂದಾರ್ ವಿರುದ್ಧ ಕೊಲೆ ಯತ್ನ ಪ್ರಕರಣಗಳಿವೆ.
ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಹಿತ ಎಂಟು ಸಚಿವರ ವಿರುದ್ಧ ದ್ವೇಷದ ಭಾಷಣ ಪ್ರಕರಣಗಳಿವೆ.