ಕೋಟಾದಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದಲ್ಲಿ 15ನೇ ಪ್ರಕರಣ
ಕೋಟಾ: ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿಯೋರ್ವ ಇಲ್ಲಿನ ಬಾಡಿಗೆ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ತರಬೇತು ಕೇಂದ್ರವಾದ ರಾಜಸ್ಥಾನದ ಕೋಟಾದಲ್ಲಿ ಈ ವರ್ಷದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ 15ನೇ ಪ್ರಕರಣ ಇದಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಉತ್ತರಪ್ರದೇಶದ ಬರ್ಸಾನದ ನಿವಾಸಿ ಪರಶುರಾಮ ಎಂದು ಗುರುತಿಸಲಾಗಿದೆ. ಈತ ಕೇವಲ 7 ದಿನಗಳ ಹಿಂದೆ ಕೋಟಾಕ್ಕೆ ಆಗಮಿಸಿದ್ದ. ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಈತ ಇಲ್ಲಿನ ತರಬೇತು ಕೇಂದ್ರವೊಂದಕ್ಕೆ ಸೇರಿದ್ದ.
ಪರಶುರಾಮ ಕೋಟಾದ ಜವಾಹರ್ ನಗರದಲ್ಲಿ ಬಾಡಿಗೆಗೆ ಕೊಠಡಿಯೊಂದನ್ನು ಪಡೆದುಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಶುರಾಮ ಬುಧವಾರ ಸಂಜೆ ತನ್ನ ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದುದನ್ನು ತಾನು ನೋಡಿದ್ದೆ. ಆದರೆ, ರಾತ್ರಿ ಆತನನ್ನು ಕಾಣದೇ ಇದ್ದಾಗ ತನಗೆ ಅನುಮಾನ ಮೂಡಿತು ಎಂದು ಬಾಡಿಗೆ ಕೊಠಡಿಯ ಮಾಲಕ ಅನೂಪ್ ಕುಮಾರ್ ತಿಳಿಸಿದ್ದಾರೆ.
ಅನುಮಾನಗೊಂಡ ಅವರು ಪರಶುರಾಮನ ಕೊಠಡಿಯ ಬಾಗಿಲು ತಟ್ಟಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಅಲ್ಲಿಗೆ ಆಗಮಿಸಿದ ಪೊಲೀಸರು ಕೊಠಡಿಯ ಬಾಗಿಲ ಒಡೆದಿದ್ದಾರೆ. ಆಗ ಪರಶುರಾಮ್‌ನ ಮೃತದೇಹ ಫ್ಯಾನ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯೊಂದಿಗೆ ಕೋಟಾದಲ್ಲಿ 2024ರಲ್ಲಿ ವಿದ್ಯಾರ್ಥಿಗಳ ಸಂದೇಹಾಸ್ಪದ ಆತ್ಮಹತ್ಯೆಯ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇಲ್ಲಿ 29 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು.