ನೇತಾಜಿ ಸಿದ್ಧಾಂತ ಪ್ರಚಾರಕ್ಕೆ ಬೆಂಬಲ ನೀಡಿಲ್ಲವೆಂದು ಬಿಜೆಪಿಗೆ ರಾಜಿನಾಮೆ ನೀಡಿದ ನೇತಾಜಿ ಮೊಮ್ಮಗ

Update: 2023-09-06 15:54 GMT

ಚಂದ್ರಕುಮಾರ್ ಬೋಸ್ | Photo: PTI 

ಕೋಲ್ಕತ್ತಾ: 2024 ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಪಕ್ಷದ ಮಾಜಿ ಉಪಾಧ್ಯಕ್ಷ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

2016 ರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉಪಾಧ್ಯಕ್ಷರಾಗಿದ್ದ ಚಂದ್ರಕುಮಾರ್ ಬೋಸ್ ಅವರನ್ನು 2020 ರಲ್ಲಿ ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಬೋಸ್ ಸಹೋದರರಾದ ಸುಬಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಬಿಜೆಪಿ ಯಾವುದೇ ಬೆಂಬಲವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಅವರು ಕಮಲ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

“ಬೋಸ್‌ ಸಹೋದರರ ಸಿದ್ಧಾಂತವನ್ನು ಪ್ರಚಾರಪಡಿಸುವ ಉದ್ದೇಶಗಳನ್ನು ಸಾಧಿಸುವ ನನ್ನ ಪ್ರಯತ್ನಗಳಿಗೆ ಬಿಜೆಪಿಯಿಂದ ಕೇಂದ್ರ ಅಥವಾ ಪಶ್ಚಿಮ ಬಂಗಾಳದ ರಾಜ್ಯ ಮಟ್ಟದಲ್ಲಿ ಯಾವುದೇ ಬೆಂಬಲವನ್ನು ಪಡೆದಿಲ್ಲ. ಜನರನ್ನು ತಲುಪಲು ಬಂಗಾಳದ ಕಾರ್ಯತಂತ್ರವನ್ನು ಸೂಚಿಸುವ ವಿವರವಾದ ಪ್ರಸ್ತಾಪವನ್ನು ನಾನು ಮುಂದಿಟ್ಟಿದ್ದೇನೆ. ಆದರೂ ನನ್ನ ಪ್ರಸ್ತಾಪಗಳನ್ನು ನಿರ್ಲಕ್ಷಿಸಲಾಗಿದೆ, ಈ ದುರದೃಷ್ಟಕರ ಪರಿಸ್ಥಿತಿಗಳನ್ನು ಗಮನಿಸಿದರೆ, ನಾನು ಬಿಜೆಪಿಯ ಸದಸ್ಯನಾಗಿ ಮುಂದುವರಿಯುವುದು ಅಸಾಧ್ಯ” ಎಂದು ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ.

"ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ, ಮಾರ್ಗದರ್ಶಕ ಮತ್ತು ಒಡನಾಡಿಯಾಗಿದ್ದ ನನ್ನ ಅಜ್ಜ ಶರತ್ ಚಂದ್ರ ಬೋಸ್ ಅವರ 134 ನೇ ಜನ್ಮ ವಾರ್ಷಿಕೋತ್ಸವದಂದು ನಾನು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.

“ಬಿಜೆಪಿ ಸೇರುವಾಗ ನನ್ನ ಚರ್ಚೆಗಳು ಆಗ ಬೋಸ್ ಸಹೋದರರ ʼಒಳಗೊಳ್ಳುವ ಸಿದ್ಧಾಂತʼದ ಮೇಲೆ ಕೇಂದ್ರೀಕೃತವಾಗಿತ್ತು. ನಾನು ಬಿಜೆಪಿ ಅಡಿಯಲ್ಲಿ ಈ ಸಿದ್ಧಾಂತವನ್ನು ರಾಷ್ಟ್ರದಾದ್ಯಂತ ಪ್ರಚಾರ ಮಾಡಲು ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಬಿಜೆಪಿ ಚೌಕಟ್ಟಿನಲ್ಲಿಯೇ ಆಜಾದ್ ಹಿಂದ್ ಮೋರ್ಚಾವನ್ನು ರಚಿಸಿ, ಧರ್ಮ, ಜಾತಿ ಮತ್ತು ಪಂಥವನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳನ್ನು ಭಾರತೀಯರಾಗಿ ಒಗ್ಗೂಡಿಸುವ ನೇತಾಜಿ ಅವರ ಸಿದ್ಧಾಂತವನ್ನು ಪ್ರಚಾರ ಮಾಡುವ ನನ್ನ ಉದ್ದೇಶಕ್ಕೆ ಬಿಜೆಪಿ ಬೆಂಬಲ ನೀಡಿಲ್ಲ" ಎಂದು ಚಂದ್ರ ಬೋಸ್ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News