ನೂತನ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಬಾಬರಿ ಮಸೀದಿ ಬದಲು ‘ಮೂರು-ಗುಮ್ಮಟ ರಚನೆ’ ಎಂದು ಉಲ್ಲೇಖ

Update: 2024-06-16 10:01 GMT

Photo: PTI

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು 12ನೇ ತರಗತಿಗಾಗಿ ಬಿಡುಗಡೆಗೊಳಿಸಿರುವ ನೂತನ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಹೆಸರಿನಿಂದ ಉಲ್ಲೇಖಿಸಲಾಗಿಲ್ಲ, ಬದಲಿಗೆ 16ನೇ ಶತಮಾನದಲ್ಲಿ ಮುಘಲ್ ಚಕ್ರವರ್ತಿ ಬಾಬರ್‌ನ ದಂಡನಾಯಕ ಮಿರ್ ಬಾಕಿ ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಿಸಿದ ‘ಮೂರು-ಗುಮ್ಮಟ ರಚನೆ’ ಎಂದು ಪ್ರಸ್ತಾಪಿಸಲಾಗಿದೆ. ‘ರಚನೆಯ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಹಿಂದು ಚಿಹ್ನೆಗಳು ಮತ್ತು ಅವಶೇಷಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು’ ಎಂದು ಪಠ್ಯಪುಸ್ತಕದಲ್ಲಿ ಹೇಳಲಾಗಿದೆ ಎಂದು indianexpress.com ವರದಿ ಮಾಡಿದೆ.

ಹಳೆಯ ಪಠ್ಯಪುಸ್ತಕದಲ್ಲಿ ಬಾಬರಿ ಮಸೀದಿಯನ್ನು 16ನೇ ಶತಮಾನದಲ್ಲಿ ಮಿರ್ ಬಾಕಿ ನಿರ್ಮಿಸಿದ್ದ ಮಸೀದಿ ಎಂದು ಉಲ್ಲೇಖಿಸಲಾಗಿತ್ತು.

ಬಾಬರಿ ಮಸೀದಿಯನ್ನು ಶ್ರೀರಾಮನು ಜನಿಸಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ಡಿಸೆಂಬರ್ 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಈ ಘಟನೆಯು ದೇಶಾದ್ಯಂತ ಕೋಮ ಗಲಭೆಗಳಿಗೆ ಕಾರಣವಾಗಿತ್ತು.

ಈಗ ಅಯೋಧ್ಯೆಯಲ್ಲಿ ಧ್ವಂಸಗೊಂಡ ಮಸೀದಿಯ ನಿವೇಶನದಲ್ಲಿ ರಾಮ ಮಂದಿರವು ನಿರ್ಮಾಣಗೊಂಡಿದ್ದು, ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅದರ ಉದ್ಘಾಟನಾ ಸಮಾರಂಭ ನೆರವೇರಿದೆ.

ನೂತನ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಅಯೋಧ್ಯೆ ಕುರಿತ ಅಧ್ಯಾಯವನ್ನು ನಾಲ್ಕು ಪುಟಗಳಿಂದ ಎರಡು ಪುಟಗಳಿಗೆ ಮೊಟಕುಗೊಳಿಸಲಾಗಿದೆ.

ಹಳೆಯ ಪುಸ್ತಕವು ಫೆಬ್ರವರಿ 1986ರಲ್ಲಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಬಾಬರಿ ಮಸೀದಿಯ ಬೀಗಗಳನ್ನು ತೆರೆದ ಬಳಿಕ ‘ಎರಡೂ ಕಡೆಗಳಲ್ಲಿ ಕ್ರೋಡೀಕರಣ’ವನ್ನು ಪ್ರಸ್ತಾವಿಸಿತ್ತು. ರಾಮ ಮಂದಿರ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿಯು ಅಯೋಧ್ಯೆಯಲ್ಲಿನ ಘಟನೆಗಳ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿತ್ತು ಮತ್ತು ವಿವಾದವು ಜಾತ್ಯತೀತತೆ ಕುರಿತು ಚರ್ಚೆಗೆ ನಾಂದಿ ಹಾಡಿತ್ತು ಎಂದೂ ಹಳೆಯ ಪುಸ್ತಕದಲ್ಲಿ ಹೇಳಲಾಗಿತ್ತು.

ನೂತನ ಪಠ್ಯಪುಸ್ತಕದಲ್ಲಿ ಈ ಉಲ್ಲೇಖಗಳನ್ನು ತೆಗೆದು ಅದರ ಬದಲಿಗೆ ‘1986ರಲ್ಲಿ ಫೈಝಾಬಾದ್ ಜಿಲ್ಲಾ ನ್ಯಾಯಾಲಯವು ಕಟ್ಟಡದ ಬೀಗಗಳನ್ನು ತೆರೆಯುವಂತೆ ಆದೇಶಿಸಿ ಅಲ್ಲಿ ಜನರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದಾಗ ಮೂರು-ಗುಮ್ಮಟ ರಚನೆಗೆ ಸಂಬಂಧಿಸಿದ ಪರಿಸ್ಥಿತಿಯು ಮಹತ್ವದ ತಿರುವನ್ನು ಪಡೆದುಕೊಂಡಿತ್ತು. ದೇವಸ್ಥಾನವನ್ನು ನೆಲಸಮಗೊಳಿಸಿದ ಬಳಿಕ ಶ್ರೀರಾಮನ ಜನ್ಮಸ್ಥಳದಲ್ಲಿ ಮೂರು-ಗುಮ್ಮಟ ರಚನೆಯನ್ನು ನಿರ್ಮಿಸಲಾಗಿತ್ತು ಎಂಬ ನಂಬಿಕೆಯಿಂದಾಗಿ ವಿವಾದವು ಹಲವಾರು ದಶಕಗಳ ಕಾಲ ಮುಂದುವರಿದಿತ್ತು’ ಎಂಬ ಪ್ಯಾರಾವನ್ನು ಸೇರಿಸಲಾಗಿದೆ.

ಆ ಸಮಯದಲ್ಲಿ ಶ್ರೀರಾಮ ಜನ್ಮಸ್ಥಳದ ಬಗ್ಗೆ ತಮ್ಮ ಕಳವಳಗಳನ್ನು ಕಡೆಗಣಿಸಲಾಗಿತ್ತು ಎಂದು ಹಿಂದುಗಳು ಭಾವಿಸಿದ್ದರೆ ಮುಸ್ಲಿಮರು ಕಟ್ಟಡದ ಮೇಲೆ ತಮ್ಮ ಸ್ವಾಧೀನದ ಭರವಸೆಯನ್ನು ಬಯಸಿದ್ದರು ಎಂದು ನೂತನ ಪಠ್ಯಪುಸ್ತಕದಲ್ಲಿ ಹೇಳಲಾಗಿದೆ.

ಹಳೆಯ ಪಠ್ಯಪುಸ್ತಕವು ‘ಬಾಬರಿ ಮಸೀದಿ ಧ್ವಂಸ,ಕಲ್ಯಾಣ ಸರಕಾರವನ್ನು ವಜಾಗೊಳಿಸಿದ ಕೇಂದ್ರ’ ಎಂಬ ಶೀರ್ಷಿಕೆಯ ವರದಿ ಸೇರಿದಂತೆ ಪತ್ರಿಕಾ ಲೇಖನಗಳ ತುಣುಕುಗಳನ್ನೂ ಒಳಗೊಂಡಿತ್ತು. ಇನ್ನೊಂದು ಸುದ್ದಿ ತುಣುಕು ಅಯೋಧ್ಯೆಯು ‘ಬಿಜೆಪಿಯ ಅತಿ ಕೆಟ್ಟ ತಪ್ಪಿ ಲೆಕ್ಕಾಚಾರವಾಗಿತ್ತು’ ಎಂಬ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿತ್ತು. ನೂತನ ಪಠ್ಯಪುಸ್ತಕವು ವಿವಾದದ ಕುರಿತು ಯಾವುದೇ ಸುದ್ದಿ ತುಣುಕುಗಳನ್ನು ಒಳಗೊಂಡಿಲ್ಲ.

1949ರವರೆಗೆ ಮುಸ್ಲಿಮರು ಮಾತ್ರ ಬಾಬರಿ ಮಸೀದಿಯಲ್ಲಿ ನಿಯಮಿತವಾಗಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು, ಆದರೆ ಆ ವರ್ಷದ ಡಿಸೆಂಬರ್‌ನಲ್ಲಿ ಹಿಂದುತ್ವ ಗುಂಪುಗಳು ಬಾಲರಾಮನ ವಿಗ್ರಹವನ್ನು ಮಸೀದಿಯಲ್ಲಿ ಗುಟ್ಟಾಗಿ ಇರಿಸಿದ್ದರು. ಇದು ಅಯೋಧ್ಯೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಿತ್ತು. ಇದನ್ನು ನಿಭಾಯಿಸಲು ಕಾರ್ಯಕಾರಿ ದಂಡಾಧಿಕಾರಿಯೋರ್ವರು ಮಸೀದಿ ಆವರಣವನ್ನು ಸ್ಥಳೀಯ ಮುನ್ಸಿಪಲ್ ಆಡಳಿತದ ವಶಕ್ಕೊಪ್ಪಿಸಿದ್ದರು. ಜನವರಿ 1950ರಲ್ಲಿ ಮುನ್ಸಿಪಲ್ ಆಡಳಿತವು ಮಸೀದಿಯ ಪ್ರವೇಶದ್ವಾರಕ್ಕೆ ಬೀಗವನ್ನು ಜಡಿದಿತ್ತು.

1986ರಲ್ಲಿ ಬಾಬರಿ ಮಸೀದಿಯ ಬೀಗಗಳನ್ನು ತೆರೆದಿದ್ದು ರಾಮ ಮಂದಿರ ಬೇಡಿಕೆಗೆ ಹೊಸ ಹುರುಪನ್ನು ನೀಡಿತ್ತು ಮತ್ತು ಅಂತಿಮವಾಗಿ 1992ರಲ್ಲಿ ಮಸೀದಿಯು ಧ್ವಂಸಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News