ಗ್ರಹಾಂ ಸ್ಟೇನ್ಸ್ ರನ್ನು ಸಜೀವವಾಗಿ ದಹಿಸಿದ್ದ ಹಂತಕ ದಾರಾ ಸಿಂಗ್ ಬಿಡುಗಡೆಗೆ ಅಭಿಯಾನ ನಡೆಸಿದ್ದ ಒಡಿಶಾದ ನೂತನ ಸಿಎಂ ಮಾಝಿ!
ಹೊಸದಿಲ್ಲಿ : ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಈಗಾಗಲೇ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಮಾಝಿಯವರು ಬಜರಂಗ ದಳದ ಕಾರ್ಯಕರ್ತ ದಾರಾ ಸಿಂಗ್‌ನನ್ನು ಬಿಡುಗಡೆಗೊಳಿಸಬೇಕು ಎಂದು ಸುದರ್ಶನ ಟಿವಿಯ ಸಂಪಾದಕ ಸುರೇಶ ಚಾವಂಕೆಯ ಬೇಡಿಕೆಯನ್ನು ಬೆಂಬಲಿಸಿದ್ದಾರೆ ಎಂಬ ವರದಿಗಳು ಹೊರಹೊಮ್ಮಿವೆ. ಸಿಂಗ್ 1999ರಲ್ಲಿ ಕ್ರೈಸ್ತ ಮಿಶನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಇಸ್ಲಾಮ್ ವಿರುದ್ಧ ದ್ವೇಷಕ್ಕಾಗಿ ಹೆಸರಾಗಿರುವ ಚಾವಂಕೆ ಸಿಂಗ್‌ನನ್ನು ಬಿಡುಗಡೆಗೊಳಿಸಲು ಅಭಿಯಾನದ ಮುಂಚೂಣಿಯಲ್ಲಿದ್ದಾರೆ. 2022 ಸೆಪ್ಟೆಂಬರ್‌ನಲ್ಲಿ ಕಿಯೊಂಝಾರ್ ಜೈಲಿನಲ್ಲಿ ಸಿಂಗ್‌ನನ್ನು ಭೇಟಿಯಾಗಲು ಚಾವಂಕೆಗೆ ಅನುಮತಿ ನಿರಾಕರಿಸಲಾಗಿತ್ತು. ಆತನ ಕುಟುಂಬ ಸದಸ್ಯರಿಗೆ ಮಾತ್ರ ಭೇಟಿಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಬಳಿಕ ಚಾವಂಕೆ ಮತ್ತು ಆಗ ಬಿಜೆಪಿಯ ಮುಖ್ಯ ಸಚೇತಕರಾಗಿದ್ದ ಮಾಝಿ ಸೇರಿದಂತೆ ಅವರ ಜೊತೆಯಲ್ಲಿದ್ದ ಬಿಜೆಪಿ ನಾಯಕರು ಜೈಲು ಅಧಿಕಾರಿಗಳ ಮೇಲೆ ಒತ್ತಡ ಹೇರಲು ಧರಣಿ ನಡೆಸಿದ್ದರು.
‘ಸಿಂಗ್‌ನನ್ನು ಬಿಡುಗಡೆಗೊಳಿಸಬೇಕು ಎನ್ನುವುದು ಕೇವಲ ಬೇಡಿಕೆಯಾಗಿದೆ. ಅಗತ್ಯವಾದರೆ ಸಿಂಗ್‌ನನ್ನು ಬೆಂಬಲಿಸಲು ನಾವು ಪಕ್ಷದಲ್ಲಿ ಚರ್ಚಿಸುತ್ತೇವೆ ’ ಎಂದು ಮಾಝಿ ಸುದ್ದಿಗಾರರಿಗೆ ತಿಳಿಸಿದ್ದರು.
1999ರಲ್ಲಿ ಸಿಂಗ್ ನೇತೃತ್ವದ ಗುಂಪು ಸ್ಟೇನ್ಸ್ ಮತ್ತು ಅವರ ಮಕ್ಕಳು ಮಲಗಿದ್ದ ವಾಹನಕ್ಕೆ ಬೆಂಕಿ ಹಚ್ಚಿತ್ತು. ಕುಷ್ಠರೋಗಿಗಳಿಗಾಗಿ ಆಶ್ರಮವನ್ನು ನಡೆಸುತ್ತಿದ್ದ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರು ಸಜೀವ ದಹನಗೊಂಡಿದ್ದರು. 2003ರಲ್ಲಿ ಕ್ರೋಧಾದಲ್ಲಿನ ವಿಚಾರಣಾ ನ್ಯಾಯಾಲಯವು ಸಿಂಗ್‌ಗೆ ಮರಣ ದಂಡನೆ ಮತ್ತು ಇತರ 12 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಬಳಿಕ ಒಡಿಶಾ ಉಚ್ಚ ನ್ಯಾಯಾಲಯವು ಸಿಂಗ್‌ನ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತ್ತು.
ಓರ್ವ ಮುಸ್ಲಿಮ್ ವ್ಯಾಪಾರಿ ಮತ್ತು ಇನ್ನೋರ್ವ ಕ್ರೈಸ್ತ ಮಿಶನರಿಯ ಕೊಲೆ ಪ್ರಕರಣಗಳಲ್ಲಿಯೂ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಸೌಜನ್ಯ : thewire.in