ಬಾಂಬ್ ಬೆದರಿಕೆ | ಮುಂಬೈನಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ
ಹೊಸದಿಲ್ಲಿ : ಮುಂಬೈನಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಬಾಂಬ್ ಬೆದರಿಕೆಯ ಕಾರಣದಿಂದ ಸೋಮವಾರ ಬೆಳಗ್ಗೆ ದಿಲ್ಲಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತು.
239 ಪ್ರಯಾಣಿಕರಿದ್ದ ವಿಮಾನವನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
"ಅಕ್ಟೋಬರ್ 14 ರಂದು ಮುಂಬೈನಿಂದ ನ್ಯೂಯಾರ್ಕ್ ಗೆ ತೆರಳುವ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಕಾರಣ ದಿಲ್ಲಿಗೆ ತಿರುಗಿಸಲಾಯಿತು. ಎಲ್ಲಾ ಪ್ರಯಾಣಿಕರು ವಿಮಾನದಿಂದ ಇಳಿದಿದ್ದಾರೆ. ಅವರೆಲ್ಲರೂ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿದ್ದಾರೆ" ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಐಸೋಲೇಶನ್ ರನ್‌ವೇಯಲ್ಲಿ ವಿಮಾನವನ್ನು ನಿಲ್ಲಿಸಲಾಗಿದ್ದು, ಬಾಂಬ್ ಸ್ಕ್ವಾಡ್ ತಂಡ ಸೇರಿದಂತೆ ಭದ್ರತಾ ಏಜೆನ್ಸಿಗಳು ಸಂಪೂರ್ಣ ತಪಾಸಣೆ ನಡೆಸಿವೆ ಎಂದು ತಿಳಿದು ಬಂದಿದೆ.
"ವಿಮಾನವು ಪ್ರಸ್ತುತ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದೆ. ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಗುಣಮಟ್ಟದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.