ಪ್ರತಿಭಟನಾ ನಿರತ ರೈತರ ದಿಲ್ಲಿ ಪ್ರವೇಶ ತಡೆಯಲು ಯತ್ನ ; ಪಂಜಾಬ್ ಗಡಿಯಲ್ಲಿ ಹರಿಯಾಣದಿಂದ ಬೇಲಿ ನಿರ್ಮಾಣಕ್ಕೆ ಭಗವಂತ ಮಾನ್ ವಿರೋಧ

Update: 2024-02-11 16:47 GMT

ಭಗವಂತ ಮಾನ್ | Photo: PTI 

ಹೊಸದಿಲ್ಲಿ: ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ದಿಲ್ಲಿ ಪ್ರವೇಶಿಸುವುದನ್ನು ತಡೆಯಲು ಪಂಜಾಬಿನ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತಿತರ ರಸ್ತೆಗಳುದ್ದಕ್ಕೂ ಬೃಹತ್ ಬೇಲಿಯನ್ನು ನಿರ್ಮಿಸುವ ಹರಿಯಾಣ ಸರಕಾರದ ಪ್ರಯತ್ನವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ರವಿವಾರ ಖಂಡಿಸಿದ್ದಾರೆ. ಪಂಜಾಬ್ ಹಾಗೂ ಭಾರತದ ನಡುವೆ ಗಡಿಬೇಲಿಯನ್ನು ನಿರ್ಮಿಸಲು ಆಸ್ಪದ ನೀಡಕೂಡದೆಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಗೋಯಿಂದ್ವಾಲ್ ಸಾಹಿಬ್ನಲ್ಲಿರುವ ‘ಗುರು ಅಮರ್ದಾಸ್ ಜೀ ವಿದ್ಯುತ್ ಸ್ಥಾವರ’ವನ್ನು ಉದ್ಘಾಟಿಸಿದ ಬಳಿಕ ತರಣ್ತರಣ್ ಜಿಲ್ಲೆಯ ಸಸೋನ್ ಗ್ರಾಮದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಪಾಲ್ಗೊಂಡ ಸಂದರ್ಭ ಅವರು ಈ ಮನವಿ ಮಾಡಿದ್ದಾರೆ.

‘‘ಹರಿಯಾಣದಲ್ಲಿ ಏನಾಗುತ್ತಿದೆ? ಪಂಜಾಬ್ ಗಡಿಯಲ್ಲಿ ಅವರು ಬೇಲಿಯನ್ನು ಸ್ಥಾಪಿಸುತ್ತಿದ್ದಾರೆ. ಪ್ರತಿಭಚನಾ ನಿರತ ರೈತರ ಜೊತೆ ಮಾತುಕತೆಯಲ್ಲಿ ತೊಡಗುವಂತೆ ನಾನು ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತ-ಪಂಜಾಬ್ ಗಡಿಯನ್ನು ಸೃಷ್ಟಿಸುವುದನ್ನು ದಯವಿಟ್ಟು ತಡೆಯಿರಿ. ನೀವು ಗಡಿಯನ್ನು ಸ್ಥಾಪಿಸುತ್ತಿದ್ದೀರಾ? ಪಾಕ್ ಜೊತೆಗಿನ ಗಡಿಯಲ್ಲೂ ಇದೇ ರೀತಿಯ ಫೆನ್ಸಿಂಗ್ ಅಸ್ತಿತ್ವದಲ್ಲಿದೆ” ಎಂದವರು ಹೇಳಿದರು.

ರೈತ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಫೆಬ್ರವರಿ 13ರಂದು ದಿಲ್ಲಿ ತಲುಪುವುದಕ್ಕಾಗಿ ಹರಿಯಾಣವನ್ನು ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ಬೇಲಿಯನ್ನು ನಿರ್ಮಿಸಲಾಗುತ್ತಿದೆ ಎಂದು ಹರಿಯಾಣ ಸರಕಾರದ ಮೂಲಗಳು ತಿಳಿಸಿವೆ.

‘‘ಗೋಧಿ ಹಾಗೂ ಭತ್ತದ ವಿಷಯವಾಗಿ ಹೇಳುವುದಾದರೆ, ನೀವು ಎಲ್ಲಿಗೆ ಹೋಗುವಿರಿ? ಈ ಸಂದರ್ಭಗಳಲ್ಲಿ ಗಡಿಗಳು ತೆರೆದಿರುತ್ತವೆ. ವಿಶೇಷ ರೈಲುಗಳು ಪಂಜಾಬ್ ಗೆ ಆಗಮಿಸುತ್ತವೆ. ನಾವು ನಿಮಗೆ ಆಹಾರವನ್ನು ಒದಗಿಸುತ್ತಿದ್ದೇವೆ ಮತ್ತು ನಿಮ್ಮ ಹೊಟ್ಟೆಗಳನ್ನು ತುಂಬಿಸುತ್ತಿದ್ದೇವೆ. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಗಣನೀಯ ಕೊಡುಗೆಗಳನ್ನು ನೀಡಿದ್ದೇವೆ. ನಮ್ಮನ್ನು ನಿಮ್ಮವರೇ ಎಂದು ತಿಳಿಯಿರಿ’’ ಎಂದು ಭಗವಂತಮಾನ್ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

‘‘ ನಮ್ಮ ಸೈನಿಕರು ಗಡಿಯಲ್ಲಿ ಕಾವಲು ನಿಂತಿದ್ದಾರೆ. ನಿಮಗೆ ತಿಳಿಯುವ ಮೊದಲೇ ಅವರು ಬುಲೆಟ್ ಗೆ ಎದೆಯೊಡ್ಡುತ್ತಾರೆ. ಆದಾಗ್ಯೂ ಕೆಲವು ಹುತಾತ್ಮರಿಗೆ ಯಾವುದೇ ಗೌರವನಮನವೂ ಇರುವುದಿಲ್ಲ. ಯಾಕೆಂದರೆ ಅವರು ಅಗ್ನಿವೀರರಾಗಿದ್ದಾರೆ. ಕೇಂದ್ರ ಸರಕಾರ ನಮ್ಮನ್ನು ಎಷ್ಟು ದ್ವೇಷಿಸುತ್ತಿದೆಯೆಂದರೆ ರಾಷ್ಟ್ರಗೀತೆಯಿಂದ ಪಂಜಾಬಿನ ಹೆಸರನ್ನು ಅವರು ಆಳಿಸಲೂಬಹುದು. ರಾಷ್ಟ್ರಗೀತೆಯಿಂದ ಪಂಜಾಬಿನ ಹೆಸರನ್ನು ಅಳಿಸುವುದಕ್ಕೆ ವಿಧೇಯಕವೊಂದನ್ನು ಅಂಗೀಕರಿಸಿದರೆ ಸಾಕಾಗುತ್ತದೆ’’ ಎಂದು ಭಗವಂತ ಮಾನ್ ವ್ಯಂಗ್ಯವಾಡಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News