ವಾರಣಾಸಿ | ನಾಮಪತ್ರ ಸಲ್ಲಿಸಲು ಅವಕಾಶವೇ ಸಿಗುತ್ತಿಲ್ಲ, ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ : ಕಾಮಿಡಿಯನ್ ಶ್ಯಾಮ್ ರಂಗೀಲಾ
ವಾರಣಾಸಿ : ನಾಮಪತ್ರ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಸುಮ್ಮನೆ ಕಾಯುವಂತೆ ಹೇಳಿ, ಬಳಿಕ ಸಮಯ ಮುಗಿದಿದೆ ಇನ್ನು ಹೊರಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಎಂದು ಕಾಮಿಡಿಯನ್ ಶ್ಯಾಮ್ ರಂಗೀಲಾ ಆರೋಪಿಸಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಫರ್ಧಿಸಲು ಇಚ್ಛಿಸಿರುವ ಅವರು ನಾಮಪತ್ರ ಸಲ್ಲಿಸಲು ತಮಗೆ ಅವಕಾಶ ಸಿಗದಿರುವ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ವೀಡಿಯೊ ಹಂಚಿಕೊಂಡಿರುವ ಅವರು, “ಯಾರ ನಾಮಪತ್ರ ಪಡೆಯಬೇಕು, ಯಾರದ್ದು ಪಡೆಯಬಾರದು ಎಂದು ಮೊದಲೇ ತೀರ್ಮಾನವಾದ ಹಾಗಿದೆ. ಕೆಲವು ಅಭ್ಯರ್ಥಿಗಳಂತೂ ಕಾದೂ ಕಾದು ಸುಸ್ತಾಗಿ ಕಣ್ಣೀರು ಹಾಕುತಿದ್ದರು. ಯಾರೇ ಏನೇ ಪ್ರತಿಕ್ರಿಯೆ ನೀಡಿದರೂ, ಅಧಿಕಾರಿಗಳು ಸುಮ್ಮನೆ ಮುಗುಳ್ನಗುತ್ತಿದ್ದರು” ಎಂದು ಹೇಳಿದರು.
“ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಸಿಕ್ಕಿದರೆ ಅದೇ ನನ್ನ ಗೆಲುವು. ಮೋದಿ ಭಕ್ತರ ಮತಗಳು ನಮಗೆ ಬೇಡ. ಮತ ಯಂತ್ರದಲ್ಲಿ ಹೆಸರು ಬಂದರೆ ಸಾಕು. ಅದರೆ ಅದಕ್ಕೇ ಇಲ್ಲಿ ಅವಕಾಶ ಸಿಗುತ್ತಿಲ್ಲ. ನಾಮಪತ್ರ ಸಲ್ಲಿಸಲು ಅವಕಾಶವೇ ಸಿಗುತ್ತಿಲ್ಲ. ಮೂವರು ನಾಮಪತ್ರ ಸಲ್ಲಿಸಲು ಕಾಯುತ್ತಿದ್ದರು. ಅವರೂ ಕಾಯುತ್ತಲೇ ಇದ್ದರು. ಒಳಗೆ ಹೋಗಲು ಅವರಿಗೂ ಅವಕಾಶವೇ ಸಿಗಲಿಲ್ಲ. ಕಾಯುವಂತೆ ಪೊಲೀಸರು ಹೇಳಿದರು. ನಾಮಪತ್ರ ಸಲ್ಲಿಸಲು ಅವಕಾಶ ನೀಡುವುದಾಗಿ ಹೇಳಿದರು. ಆದರೆ ನಾಮಪತ್ರ ಸಲ್ಲಿಸಲು ಅವಕಾಶವೇ ಸಿಗಲಿಲ್ಲ. ಕಾದರೂ ಪ್ರಯೋಜನವಾಗಲಿಲ್ಲ. ಮೂರು ಗಂಟೆಗೆ ಗೇಟು ಬಂದ್ ಮಾಡಿದರು. ಇನ್ನು ನಾಮಪತ್ರ ಸಲ್ಲಿಸಲು ಸಾಧ್ಯವಿಲ್ಲ. ನೀವು ಹೋಗಿ ಎಂದರು” ಎಂದು ಶ್ಯಾಮ್ ರಂಗೀಲಾ ಹೇಳಿದ್ದಾರೆ.
“ಮೇ 10 ರಿಂದ ನಾನು ನಾಮಪತ್ರ ಸಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಅಂದೂ ಸಾಧ್ಯವಾಗಲಿಲ್ಲ. ಇಂದು ಮೇ 13ಕ್ಕೆ ಮತ್ತೆ ಪ್ರಯತ್ನಿಸಿ ನೋಡಿದೆ. ಇಂದೂ ಸಾಧ್ಯವಾಗಲಿಲ್ಲ. ಸೂಚಕರ ಕೊರತೆಯಿದ್ದವರಂತೆ ನಮ್ಮನ್ನು ನೋಡಲಾಗುತ್ತಿದೆ. ನನಗೆ ಸೂಚಕರ ಕೊರತೆಯಿರಬಹುದು. ಒಳಗೆ ಕಾದು ನಿಂತವರಿಗೂ ಸೂಚಕರ ಕೊರತೆಯಿದೆಯೇ? ಸೂಚಕರಿಲ್ಲದೇ ನಿಲ್ಲಲು ಅವರಿಗೇನು ತಲೆಕೆಟ್ಟಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
“ಯಾರೊಬ್ಬರ ನಾಮಪತ್ರವನ್ನೂ ತೆಗೆದುಕೊಳ್ಳುತ್ತಿಲ್ಲ. ಮಧ್ಯಾಹ್ನ 3 ಗಂಟೆಗೆ ಗೇಟನ್ನು ಬಂದ್ ಮಾಡಲಾಗುತ್ತಿದೆ. ಅಧಿಕಾರಿಗಳು ಅರ್ಥ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ನಾವು ಅದನ್ನುಅರ್ಥ ಮಾಡಿಕೊಂಡೆವು. ಪ್ರಜಾಪ್ರಭುತ್ವದ ಗಂಟಲು ಹಿಸುಕಲಾಗುತ್ತಿರುವುದನ್ನು ನಾನು ಕಂಡಿದ್ದೇನೆ. ಇನೂ ಹತ್ಯೆ ಇನ್ನೂ ಆಗಿಲ್ಲ. ಆದರೂ, ನಾನು ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಪ್ರಯತ್ನಸುತ್ತೇನೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.