ಬಿಜೆಪಿ ಮುಖ್ಯ ಕಾರ್ಯಾಲಯಕ್ಕೆ ಜಾಥಾ ನಡೆಸಿದ ಆಪ್ ಕಾರ್ಯಕರ್ತರ ಬಂಧನ
ಹೊಸದಿಲ್ಲಿ : ‘ಜೈಲ್ ಭರೋ’ ಪ್ರತಿಭಟನೆಯ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಮುಖ್ಯ ಕಾರ್ಯಾಲಯದೆಡೆಗೆ ಕಾಲ್ನಡಿಗೆ ಜಾಥಾ ನಡೆಸಿದ ಆಮ್ ಆದ್ಮಿ ಪಕ್ಷ (ಆಪ್)ದ ಕಾರ್ಯಕರ್ತರು ನಡೆಸಿದ್ದು, ಅವರಲ್ಲಿ ಹಲವರನ್ನು ದಿಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.
ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ನಡೆದಿದೆಯೆನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರ ಬಂಧನವನ್ನು ಖಂಡಿಸಿ ಆಪ್ ಕಾಲ್ನಡಿಗೆ ಜಾಥಾ ನಡೆಸಿದೆ.
ರವಿವಾರ ಮುಂಜಾನೆ, ಆಪ್ ಪಕ್ಷದ ನೂರಾರು ಕಾರ್ಯಕರ್ತರು ಡಿಡಿಯು ಮಾರ್ಗ್ ನಲ್ಲಿರುವ ಆಪ್ ಮುಖ್ಯ ಕಾರ್ಯಾಲಯದ ಹೊರಗಡೆ ಜಮಾಯಿಸಿದರು ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬಿಜೆಪಿ ಮುಖ್ಯ ಕಾರ್ಯಾಲಯದತ್ತ ಪಾದಯಾತ್ರೆ ಆರಂಭಿಸಿದರು ಆಪ್ ನಾಯಕರು ಮುಂದಕ್ಕೆ ಸಾಗದಂತೆ ಪೊಲೀಸರು ಇರಿಸಿದ್ದ 10 ಅಡಿ ಎತ್ತರದ ತಡೆಬೇಲಿಗಳ ಮುಂದೆ ಕುಳಿತರು. ಸುಮಾರು 20 ನಿಮಿಷಗಳ ಕಾಲ ತಡೆಬೇಲಿಗಳ ಮುಂದೆ ಧರಣಿ ಕುಳಿತ ಪಕ್ಷದ ನಾಯಕರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದರು.
ತರುವಾಯ ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಕೇದ್ರಿವಾಲ್ ಅವರು ತಮ್ಮ ಪಕ್ಷದ ಕಾರ್ಯಾಲಯಕ್ಕೆ ಮರಳಿದರು.
ಆಪ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಮುಖ್ಯ ಕಾರ್ಯಾಲಯಕ್ಕೆ ಭದ್ರತೆಯನ್ನು ಬಿಗಿಗೊಳಿಸಿದ್ದರು. ಅರೆಸೈನಿಕ ಪಡೆಯ ಯೋಧರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಬಿಜೆಪಿ ಮುಖ್ಯ ಕಾರ್ಯಾಲಯದ ಬಳಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 144ರಡಿ ನಿಷೇಧಾಜ್ಞೆ ಹೇರಲಾಗಿತ್ತು. ಪ್ರತಿಭಟನೆ ನಡೆಸುವುದಕ್ಕೆ ಆಪ್ ಅನುಮತಿಯನ್ನು ಪಡೆದಿರಲಿಲ್ಲವೆಂದು ಅವರು ತಿಳಿಸಿದ್ದಾರೆ.