ವಿಪಕ್ಷಗಳ ವಿರೋಧದ ನಡುವೆ ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆಣ್ ರಿಜಿಜು ಇಂದು ಲೋಕಸಭೆಯಲ್ಲಿ ವಕ್ಫ್ ಮಸೂದೆಯನ್ನು ವಿಪಕ್ಷಗಳ ವಿರೋಧ ಮತ್ತು ಪ್ರತಿಭಟನೆಗಳ ನಡುವೆ ಮಂಡಿಸಿದ್ದಾರೆ. ಇದು ಅಸಂವಿಧಾನಿಕ ಮತ್ತು ನಿರಂಕುಶ ಎಂದು ವಿಪಕ್ಷಗಳು ಮಸೂದೆಯನ್ನು ಬಣ್ಣಿಸಿವೆ. ಈ ಮಸೂದೆ ಕಾನೂನಾಗಿ ಜಾರಿಯಾದಲ್ಲಿ ವಕ್ಫ್ ಆಸ್ತಿಗಳ ಕುರಿತಂತೆ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣ ದೊರೆಯುವುದೆಂದು ಹೇಳಲಾಗಿದೆ.
ಈ ಮಸೂದೆ ದೇಶದ ಸಂವಿಧಾನದ ಮೇಲಿನ ದಾಳಿಯಾಗಿದೆ ಹಾಗೂ ಅದು ಧಾರ್ಮಿಕ ವಿಭಜನೆ ಮತ್ತು ದ್ವೇಷಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಸಂಸದ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.
“ಹಕ್ಕುಪತ್ರವಿಲ್ಲದೇ ಇರುವ ಪ್ರತಿಯೊಂದು ಮಸೀದಿಯ ಜಮೀನಿನ ಕುರಿತು ವಿವಾದವಿದೆ. ಧಾರ್ಮಿಕ ಕಂದರ ಸೃಷ್ಟಿಸಿ ಹಿಂಸೆಗೆ ದಾರಿ ಮಾಡಿಕೊಡುವುದು ನಿಮ್ಮ ಉದ್ದೇಶ,”ಎಂದು ಅವರು ಆರೋಪಿಸಿದರು.
“ಈ ಮಸೂದೆಯ ಮೂಲಕ ವಕ್ಫ್ ಆಡಳಿತ ಮಂಡಳಿಯಲ್ಲಿ ಮುಸ್ಲಿಮೇತರರನ್ನೂ ಸದಸ್ಯರನ್ನಾಗಿಸುವ ಅವಕಾಶವಿದೆ, ಈ ಮಸೂದೆ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ,” ಎಂದೂ ಅವರು ಆರೋಪಿಸಿದರು.
“ನಾವು ಹಿಂದುಗಳು ಆದರೆ ಇತರ ಧರ್ಮಗಳನ್ನೂ ಗೌರವಿಸುತ್ತೇವೆ. ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಗಳನ್ನು ಗಮನದಲ್ಲಿರಿಸಿ ಇದನ್ನು ಮಂಡಿಸಲಾಗುತ್ತಿದೆ,” ಎಂದು ಅವರು ಹೇಳಿದರು.
ಈ ಮಸೂದೆಯು ಸಂವಿಧಾನದ ವಿಧಿ 30 ಅನ್ನು ಉಲ್ಲಂಘಿಸುತ್ತದೆ,” ಎಂಡು ಡಿಎಂಕೆ ಸಂಸದೆ ಕನ್ನಿಮೋಝಿ ಹೇಳಿದರು.
ಆದರೆ ಜೆಡಿ(ಯು) ಸಂಸದ ಲಲನ್ ಸಿಂಗ್ ಮಾತನಾಡಿ ವಿಪಕ್ಷ ಸದಸ್ಯರು ಆರೋಪಿಸುವಂತೆ ಮಸೂದೆ ಮುಸ್ಲಿಂ ವಿರೋಧಿಯಲ್ಲ ಎಂದು ಹೇಳಿದರು.