ನ್ಯೂಸ್ ಕ್ಲಿಕ್ ಪ್ರಕರಣ: ದಿಲ್ಲಿ ಪೊಲೀಸರಿಂದ ಪತ್ರಕರ್ತರಾದ ಊರ್ಮಿಳೇಶ್, ಅಭಿಸಾರ್ ಶರ್ಮಾರ ಎರಡನೇ ಬಾರಿ ವಿಚಾರಣೆ
ಹೊಸದಿಲ್ಲಿ: ಚೀನಾ ಪರ ಪ್ರಚಾರಕ್ಕೆ ದೇಣಿಗೆ ಪಡೆದ ಆರೋಪದಲ್ಲಿ ‘ನ್ಯೂಸ್ ಕ್ಲಿಕ್’ ಪೋರ್ಟಲ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತರಾದ ಉರ್ಮಿಳೇಶ್ ಹಾಗೂ ಅಭಿಸಾರ್ ಶರ್ಮಾ ಅವರನ್ನು ದಿಲ್ಲಿ ಪೊಲೀಸರು ಗುರುವಾರ ಎರಡನೇ ಬಾರಿ ವಿಚಾರಣೆ ನಡೆಸಿದ್ದಾರೆ.
ಇಬ್ಬರು ಪತ್ರಕರ್ತರು ಲೋಧಿ ಕಾಲನಿಯಲ್ಲಿರುವ ದಿಲ್ಲಿ ಪೊಲೀಸರ ವಿಶೇಷ ಘಟಕಕ್ಕೆ ತಲುಪಿದರು. ಗುರುವಾರ ಅಪರಾಹ್ನ ವಿಚಾರಣೆಯಲ್ಲಿ ಪಾಲ್ಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯೂಸ್ ಕ್ಲಿಕ್ ನ ಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ವಿಶೇಷ ಕೋಶ ಬಂಧಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಮಂಗಳವಾರ ಒಟ್ಟು 46 ಪತ್ರಕರ್ತರನ್ನು ಹಾಗೂ ನ್ಯೂಸ್ ಕ್ಲಿಕ್ಗೆ ದೇಣಿಗೆ ನೀಡಿದವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ಮೊಬೈಲ್ ಫೋನ್ ಹಾಗೂ ಇತರ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.