ಗುಜರಾತ್, ಒಡಿಶಾದಲ್ಲಿನ ಘನ ತ್ಯಾಜ್ಯ ಹಾಗೂ ಕೊಳಚೆ ನೀರು ನಿರ್ವಹಣೆ ಕುರಿತು ಕಳವಳ ವ್ಯಕ್ತಪಡಿಸಿದ NGT
ಹೊಸದಿಲ್ಲಿ: ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ತ್ಯಾಜ್ಯ ನಿರ್ವಹಣೆ ವಸ್ತುಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಗುಜರಾತ್ ಮತ್ತು ಒಡಿಶಾ ರಾಜ್ಯಗಳು ಸಲ್ಲಿಸಿರುವ ಪ್ರಗತಿ ವರದಿಗಳನ್ನು ವಿಶ್ಲೇಷಿಸಿದ ನಂತರ, ಈ ಸಂಬಂಧ ಹಲವಾರು ವಿಷಯಗಳ ಕುರಿತು ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಘನ ತ್ಯಾಜ್ಯ ನಿರ್ವಹಣೆ ನಿಯಮಗಳು ಹಾಗೂ ಸಾಕಷ್ಟು ಪ್ರಮಾಣದ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಕ್ಕನುಗುಣವಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿ ಗುಜರಾತ್ ಮತ್ತು ಒಡಿಶಾ ರಾಜ್ಯಗಳು ಸಲ್ಲಿಸಿರುವ ಪ್ರತ್ಯೇಕ ಪ್ರಗತಿ ವರದಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರೀವಾಸ್ತವ ನ್ಯಾಯಪೀಠವು ಪರಿಗಣನೆಗೆ ತೆಗೆದುಕೊಂಡಿತು.
ಕಳೆದ ವರ್ಷ ತ್ಯಾಜ್ಯ ನಿರ್ವಹಣೆಯಲ್ಲಿನ ಕೊರತೆಗಾಗಿ ಗುಜರಾತ್ ಗೆ 2,100 ಕೋಟಿ ರೂ.ದಂಡ ವಿಧಿಸುವುದರೊಂದಿಗೆ ವಿವಿಧ ರಾಜ್ಯಗಳ ಮೇಲೆ ಹಸಿರು ನ್ಯಾಯಮಂಡಳಿಯು ಪರಿಸರ ಪರಿಹಾರ ದಂಡವನ್ನು ವಿಧಿಸಿತ್ತು. ಈ ದಂಡದ ಮೊತ್ತವನ್ನು ರಿಂಗ್ ಫೆನ್ಸಿಂಗ್ ಖಾತೆಯಲ್ಲಿರಿಸಲು ನ್ಯಾಯಮಂಡಳಿ ಸೂಚಿಸಿತ್ತು.
ತ್ಯಾಜ್ಯ ನಿರ್ವಹಣೆಯಲ್ಲಿನ ನ್ಯೂನತೆಯನ್ನು ಸರಿಪಡಿಸಲು 1,138 ಕೋಟಿ ರೂ.ವನ್ನು ಮೀಸಲಿರಿಸಲಾಗಿದೆ ಎಂದು ಒಡಿಶಾ ರಾಜ್ಯ ಸರಕಾರವು ಪ್ರಮಾಣ ಪತ್ರ ಸಲ್ಲಿಸಿದ ನಂತರ, ಒಡಿಶಾ ರಾಜ್ಯಕ್ಕೆ ವಿಧಿಸಿದ್ದ ದಂಡವನ್ನು ಹಸಿರು ನ್ಯಾಯಮಂಡಳಿ ಕಡಿತಗೊಳಿಸಿತ್ತು.
“ತ್ಯಾಜ್ಯ ಸಂಸ್ಕರಣೆಯಲ್ಲಿನ ಕೊರತೆಯು ಹೆಚ್ಚು ಕಮ್ಮಿ ಕಳೆದ ವರ್ಷ ವರದಿಯಾದಷ್ಟೇ ಇದೆ. ತ್ಯಾಜ್ಯ ಉತ್ಪಾದನೆ ಪ್ರಮಾಣದಷ್ಟೇ ತ್ಯಾಜ್ಯ ಸಂಸ್ಕರಣೆ ಸೌಲಭ್ಯಗಳ ಕೊರತೆ ಇದೆ. ಹಾಲಿ ಅಂದಾಜಿನ ಪ್ರಕಾರ, ದಿನವಹಿ 10,317 ಟನ್ ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ದಿನವಹಿ 8,872 ಟನ್ ತ್ಯಾಜ್ಯವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಇದರಿಂದ ದಿನವಹಿ 1,445 ಟನ್ ನಷ್ಟು ತ್ಯಾಜ್ಯ ಸಂಸ್ಕರಣೆಯ ಕೊರತೆಯುಂಟಾಗಿದೆ” ಎಂದು ನ್ಯಾಯಾಂಗ ಸದಸ್ಯ ನ್ಯಾ. ಸುಧೀರ್ ಕುಮಾರ್ ಅಗರ್ವಾಲ್ ಹಾಗೂ ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರನ್ನೊಳಗೊಂಡ ನ್ಯಾಯಪೀಠವು ಗುಜರಾತ್ ನಲ್ಲಿನ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಏಳು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 1.24 ಲಕ್ಷ ಟನ್ ನಷ್ಟು ಬಾಕಿಯುಳಿದಿರುವ ತ್ಯಾಜ್ಯವನ್ನು ಸಂಸ್ಕರಿಸಬೇಕಿದೆ ಎಂಬುದನ್ನೂ ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಿತು.
ಗುಜರಾತ್ ರಾಜ್ಯದಲ್ಲಿನ ಕೊಳಚೆ ನೀರು ಶುದ್ಧೀಕರಣದಲ್ಲಿ ಪ್ರತಿ ದಿನ ಇನ್ನೂ 531 ದಶಲಕ್ಷ ಲೀಟರ್ ನಷ್ಟು ಕೊರತೆ ಇದೆ ಎಂದೂ ನ್ಯಾಯಮಂಡಳಿ ಬೊಟ್ಟು ಮಾಡಿತು.
ಎರಡೂ ರಾಜ್ಯಗಳಿಂದ ನೂತನ ವರದಿಗಳನ್ನು ಕೋರಿರುವ ನ್ಯಾಯಮಂಡಳಿ, ಒಡಿಶಾ ವರದಿ ಕುರಿತ ವಿಚಾರಣೆಯನ್ನು ಎಪ್ರಿಲ್ 28, 2025ಕ್ಕೆ ಮುಂದೂಡಿದ್ದರೆ, ಗುಜರಾತ್ ವರದಿ ಕುರಿತ ವಿಚಾರಣೆಯನ್ನು ಜುಲೈ 22, 2025ಕ್ಕೆ ಮುಂದೂಡಿದೆ.