ಕೇರಳದಲ್ಲಿ ನಿಫಾ: ಕೋಝಿಕ್ಕೋಡ್ ಕಂಟೈನ್ಮೆಂಟ್ ವಲಯದಲ್ಲಿ ನಿರ್ಬಂಧ ಸಡಿಲಿಕೆ

Update: 2023-09-19 17:43 GMT

ಸಾಂದರ್ಭಿಕ ಚಿತ್ರ.| Photo: PTI

ತಿರುವನಂತಪುರ: ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿನ ಹೊಸ ಪ್ರಕರಣಗಳು ವರದಿಯಾಗದೇ ಇರುವುದರಿಂದ ಕೋಝಿಕ್ಕೋಡ್ ನ ವಿಪತ್ತು ನಿರ್ವಹಣಾ ಇಲಾಖೆ ಜಿಲ್ಲೆಯಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

9 ಪಂಚಾಯತ್ ಗಳ ಕಂಟೈನ್ಮೆಂಟ್ ವಲಯದಲ್ಲಿ ಈ ಸಡಿಲಿಕೆಯನ್ನು ಘೋಷಿಸಲಾಗಿದೆ. ಈ ಕಂಟೈನ್ಮೆಂಟ್ ವಲಯಗಳಲ್ಲಿರುವ ಅಂಗಡಿಗಳು ಹಾಗೂ ಸಂಕೀರ್ಣಗಳು ರಾತ್ರಿ 8 ಗಂಟೆ ವರೆಗೆ ಹಾಗೂ ಎಲ್ಲ ಬ್ಯಾಂಕುಗಳು ಅಪರಾಹ್ನ 2 ಗಂಟೆ ವರೆಗೆ ನಿಫಾ ಶಿಷ್ಟಾಚಾರಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಎ. ಗೀತಾ ತಿಳಿಸಿದ್ದಾರೆ.

ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರವನ್ನು ಅನುಸರಿಸಬೇಕು ಹಾಗೂ ಗುಂಪು ಸೇರಬಾರದು ಎಂದು ಅವರು ಹೇಳಿದ್ದಾರೆ. ಮುಂದಿನ ಆದೇಶ ಬರುವ ವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕಿತರ ಪಟ್ಟಿಯಲ್ಲಿರುವವರು ಹಾಗೂ ನಿಗಾದಲ್ಲಿರುವವರು ಈ ನಿರ್ಬಂಧವನ್ನು ಕಟ್ಟುನಿಟ್ಟಿನಿಂದ ಅನುಸರಿಸಬೇಕು. ಉಳಿದವರು ಆರೋಗ್ಯ ಇಲಾಖೆ ಸೂಚಿಸಿದ ಅವಧಿ ವರೆಗೆ ಕ್ವಾರೆಂಟೈನ್ ನಲ್ಲಿ ಇರಬೇಕು ಎಂದು ಗೀತಾ ತಿಳಿಸಿದ್ದಾರೆ.

ನಿರ್ಬಂಧ ಸಡಿಲಿಸಿದ ವಾರ್ಡುಗಳ ಪ್ರತಿನಿಧಿಗಳೊಂದಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹಾಗೂ ಸಾರ್ವಜನಿಕ ವ್ಯವಹಾರಗಳ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಅವರು ಮಂಗಳವಾರ ಸಭೆ ನಡೆಸಿದ್ದಾರೆ.

ಆರೋಗ್ಯ ಸೇವೆಯ ಕಾರ್ಯಕರ್ತರು ಸೇರಿದಂತೆ ಅತಿ ಅಪಾಯದ ಸಂಪರ್ಕಿತರ 61 ಮಾದರಿಗಳ ವರದಿ ನೆಗೆಟಿವ್ ಬಂದಿರುವುದರಿಂದ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News