ಫೋರ್ಬ್ಸ್ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ಗೆ 32ನೇ ಸ್ಥಾನ
ಹೊಸದಿಲ್ಲಿ: ಫೋರ್ಬ್ಸ್ ನಿಯತಕಾಲಿಕ ಮಂಗಳವಾರ ಪ್ರಕಟಿಸಿದ ಜಗತ್ತಿನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 32ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಎಚ್‌ಸಿಎಲ್ ಕಾರ್ಪೊರೇಶನ್‌ನ ಸಿಇಓ ರೋಶನಿ ನಾಡಾರ್ ಮಲ್ಹೋತ್ರಾ (60ನೇ ರ್ಯಾಂಕ್), ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷೆ ಸೋಮಾ ಮೊಂಡಾಲ್ (70ನೇ ರ್ಯಾಂಕ್) ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ (76ನೇ ರ್ಯಾಂಕ್) ಫೋರ್ಬ್ಸ್‌ನ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಇತರ ಮೂವರು ಭಾರತೀಯ ಮಹಿಳೆಯರು.
ಯುರೋಪ್ ಆಯೋಗದ ವರಿಷ್ಠೆ ಉರ್ಸುಲಾ ವಾನ್ ಡೆರ್ ಲಿಯೆನ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಯುರೋಪಿಯನ್ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕ್ರಿಸ್ಟಿನ್ ಲಗಾರ್ಡೆ ಎರಡನೆ ಸ್ಥಾನದಲ್ಲಿದ್ದರೆ,ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಐದನೇ ಸ್ಥಾನ ಪಡೆದಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ವಿತ್ತ ಸಚಿವೆಯಾಗಿ 2019ರ ಮೇನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಭಾರತದ ಮೊತ್ತಮೊದಲ ವಿತ್ತ ಸಚಿವೆಯೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ಕೂಡಾ ಅವರು ನಿರ್ವಹಿಸುತ್ತಿದ್ದಾರೆ. ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಮುನ್ನ ನಿರ್ಮಲಾ ಅವರು ಬ್ರಿಟನ್‌ನ ಕೃಷಿ ಎಂಜಿನಿಯರ್‌ಗಳ ಸಂಸ್ಥೆ ಹಾಗೂ ಬ್ರಿಟಿಶ್ ವರ್ಲ್ಡ್ ಸರ್ವಿಸ್ ಸುದ್ದಿಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮಹಿಳಾ ಆಯೋಗದ ಸದಸ್ಯೆಯಾಗಿಯೂ ಅವರು ಸೇವೆ ಸಲ್ಲಿಸಿದ್ದರು ಎಂದು ಫೋರ್ಬ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.