ತಮಿಳುನಾಡಿನಲ್ಲಿ ಹಿಂದಿ ಕಲಿಯಲು ಪ್ರಯತ್ನಿಸಿದ್ದಕ್ಕೆ ಅಪಹಾಸ್ಯಕ್ಕೊಳಗಾಗಿದ್ದೇನೆ: ನಿರ್ಮಲಾ ಸೀತಾರಾಮನ್ ಅಸಮಾಧಾನ
ಹೊಸದಿಲ್ಲಿ: ಶಾಲಾ ಅವಧಿಯಲ್ಲಿ ಹಿಂದಿ ಕಲಿಯಲು ಪ್ರಯತ್ನಿಸಿದ್ದಕ್ಕೆ ತಮಿಳುನಾಡಿನಲ್ಲಿ ಅಪಹಾಸ್ಯಕ್ಕೀಡಾಗಿದ್ದೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದ ಬೆನ್ನಲ್ಲೇ ಭಾಷಾ ಹೇರಿಕೆಯ ಕುರಿತು ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ.
ತನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್, ಹಿಂದಿ ಕಲಿಯಲು ಮತ್ತು ಮಾತನಾಡಲು ಬಯಸಿದ್ದಕ್ಕೆ ತಮಿಳುನಾಡಿನ ಬೀದಿಗಳಲ್ಲಿ ಅಪಹಾಸ್ಯವನ್ನು ಎದುರಿಸಬೇಕಾಯಿತು. ನೀವು ತಮಿಳುನಾಡಿನಲ್ಲಿದ್ದುಕೊಂಡು ಉತ್ತರ ಭಾರತದ ಹಿಂದಿ ಭಾಷೆ ಕಲಿಯಲು ಬಯಸುತ್ತೀರಾ? ಎಂದು ನನಗೆ ಕೇಳಲಾಗಿದೆ. ಈ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಹೇಳಿದ್ದಾರೆ.
ನನ್ನ ಆಯ್ಕೆಯ ಭಾಷೆಯನ್ನು ಕಲಿಯುವ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ. ನನ್ನನ್ನು ವಂಧೇರಿ ಎಂದು ಕರೆಯಲಾಗುತ್ತಿತ್ತು. ʼವಂಧೇರಿʼ ತಮಿಳು ಪದದ ಅರ್ಥ ಹೊರಗಿನವರು ಎಂದಾಗಿದೆ. ಹಿಂದಿ ಮತ್ತು ಸಂಸ್ಕೃತವನ್ನು ವಿದೇಶಿ ಭಾಷೆ ಎಂದು ಗ್ರಹಿಸುವ ಸಂಸ್ಕೃತಿಯನ್ನು ರಾಜ್ಯವು ಬೆಳೆಸುತ್ತಿದೆ. ತಮಿಳುನಾಡು ಭಾರತದ ಭಾಗವಲ್ಲವೇ? ಹಿಂದಿ ಕಲಿಯುವುದರಲ್ಲಿ ತಪ್ಪೇನು? ಹಿಂದಿ ಹೇರುವುದನ್ನು ವಿರೋಧಿಸುವುದು ಒಳ್ಳೆಯದು, ಆದರೆ ಅದನ್ನು ಕಲಿಯಲು ಬಯಸುವವರಿಗೆ ಏಕೆ ನಿರ್ಬಂಧಗಳನ್ನು ಹೇರಬೇಕು? ಎಂದು ಪ್ರಶ್ನಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಡಿಎಂಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ತೂತುಕುಡಿ ಸಂಸದೆ ಕೆ ಕನಿಮೊಳಿ ಅವರು ನಿರ್ಮಲಾ ಸೀತಾರಾಮನ್ ಅವರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಮಿಳುನಾಡಿನಲ್ಲಿ ಯಾವುದೇ ಭಾಷೆ ಕಲಿಯದಂತೆ ಯಾರನ್ನೂ ತಡೆಹಿಡಿಯಲಾಗಿಲ್ಲ. ನಾವು ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ, ಅದರ ಕಲಿಕೆಯನ್ನು ಅಲ್ಲ ಎಂದು ಹೇಳಿದ್ದಾರೆ.