ನಿಷಿಕಾಂತ್‌ ದುಬೆಗೆ ಮೌಖಿಕ ಪುರಾವೆ ಒದಗಿಸುವಂತೆ ಸೂಚಿಸಿ ಸಮನ್ಸ್‌

Update: 2023-10-18 11:01 GMT

Photo: PTI

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಷಿಕಾಂತ್‌ ದುಬೆ ಹಾಗೂ ಸುಪ್ರೀಂ ಕೋರ್ಟ್‌ ವಕೀಲ ಜೈ ಅನಂತ್‌ ದೆಹದ್ರಯಿ ಅವರು ಪ್ರಶ್ನೆಗಾಗಿ ನಗದು ಆರೋಪ ಹಾಗೂ ದೂರಿಗೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿಯು, ದುಬೆ ಅವರಿಗೆ ಮೌಖಿಕ ಪುರಾವೆ ಒದಗಿಸುವಂತೆ ಸೂಚಿಸಿ ಸಮನ್ಸ್‌ ಕಳುಹಿಸಿದೆ. ಈ ಕುರಿತಂತೆ ಲೋಕಸಭಾ ಸೆಕ್ರಟೇರಿಯಟ್‌ ದುಬೆ ಅವರಿಗೆ ಲಿಖಿತ ಸೂಚನೆ ನೀಡಿದೆ.

ಲೋಕಸಭೆಯ ನೈತಿಕ ಸಮಿತಿಯು ಈ ಪ್ರಕರಣದಲ್ಲಿ ಖುದ್ದಾಗಿ ದುಬೆ ಅವರಿಂದ ಅ. 26, ಗುರುವಾರದಂದು ಕೇಳಬಯಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಅದಾನಿ ಸಮೂಹವನ್ನು ಟಾರ್ಗೆಟ್‌ ಮಾಡಲು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಅವರು ಉದ್ಯಮಿಯೊಬ್ಬರಿಂದ ʼಲಂಚʼ ಪಡೆದಿದ್ದಾರೆ ಎಂದು ದುಬೆ ಆರೋಪಿಸಿದ್ದರು, ಈ ಆರೋಪವನ್ನು ಮಹುವಾ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ದುಬೆ ಅವರು ಈಗಾಗಲೇ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದು ಮಹುವಾ ವಿರುದ್ಧದ ಆರೋಪಗಳ ತನಿಖೆಗೆ ಸಮಿತಿ ರಚಿಸುವಂತೆ ಕೋರಿದ್ದರಲ್ಲದೆ ಈ ಸಮಿತಿ ತನ್ನ ವರದಿ ಸಲ್ಲಿಸುವ ತನಕ ಮಹುವಾ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಬೇಕೆಂದೂ ಕೋರಿದ್ದರು.

ಆದರೆ ಮಹುವಾ ಮಾತ್ರ ತಮ್ಮ ನಿಲುವಿನಲ್ಲಿ ಅಚಲವಾಗಿದ್ದು ಮೊದಲು ದುಬೆ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಇರುವ ಹಲವು ಸವಲತ್ತುಗಳ ದುರುಪಯೋಗ ದೂರಿನ ಕುರಿತು ತನಿಖೆ ನಡೆಸಿ ನಂತರ ತಮ್ಮ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ಧಾರೆ.

ದುಬೆ, ವಕೀಲ ದೆಹದ್ರಯಿ ಮತ್ತು ಇತರ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಸಂಸ್ಥೆಗಳು ತಮ್ಮ ವಿರುದ್ಧ ನಕಲಿ ಮತ್ತು ಅವಹೇಳನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುವುದಕ್ಕೆ ನಿರ್ಬಂಧ ಹೇರಬೇಕೆಂದು ಕೋರಿ ಮಹುವಾ ಈಗಾಗಲೇ ದಿಲ್ಲಿ ಹೈಕೋರ್ಟಿನ ಕದ ತಟ್ಟಿದ್ದಾರೆ.

ನಿಷಿಕಾಂತ್‌ ದುಬೆ ಅವರ ಎಂಬಿಎ ಮತ್ತು ಪಿಎಚ್‌ಡಿ ಪದವಿಗಳು ನಕಲಿ ಎಂದು ಆರೋಪಿಸಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಕೋರಿ ಮಹುವಾ ಅವರು ಆಗ್ರಹಿಸಿದ ಕೆಲವೇ ತಿಂಗಳುಗಳಲ್ಲಿ ಈ ಬೆಳವಣಿಗೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News