ಮಹಿಳಾ ಆಯೋಗದ ತರಾಟೆ: ಜನನ ನಿಯಂತ್ರಣ ಕುರಿತ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ ನಿತೀಶ್ ಕುಮಾರ್

Update: 2023-11-08 08:09 GMT

Photo: PTI

ಪಾಟ್ನಾ: ಮಹಿಳೆಯರು ಲೈಂಗಿಕ ಸಂಪರ್ಕದಿಂದ ದೂರ ಉಳಿಯುವ ಕ್ರಮಗಳ ಮೂಲಕ ಹೇಗೆ ಜನನ ಪ್ರಮಾಣವನ್ನು ನಿಯಂತ್ರಿಸಬಹುದು ಎಂಬ ತಮ್ಮ ಹೇಳಿಕೆಯ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಕ್ಷಮೆ ಯಾಚಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗವು, ನಿತೀಶ್ ಕುಮಾರ್ ಕ್ಷಮೆಗೆ ಆಗ್ರಹಿಸಿತ್ತು.

ಇದಕ್ಕೂ ಮುನ್ನ ಬಿಹಾರದ ಫಲವಂತಿಕೆ ಪ್ರಮಾಣ ಶೇ. 4.2ರಿಂದ ಶೇ.2.9ಕ್ಕೆ ಕುಸಿಯಲು ಕಾರಣವೇನು ಎಂಬ ಕುರಿತು ಬಿಹಾರ ವಿಧಾನಸಭೆಯಲ್ಲಿ ವಿವರಿಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವಿದ್ಯಾವಂತ ವಿವಾಹಿತ ಮಹಿಳೆಯು ಜನನ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ವಿಫಲವಾಗುವುದರಿಂದ ಹೆಚ್ಚು ಮಕ್ಕಳನ್ನು ಹೆರುತ್ತಾಳೆ. ಆದರೆ, ವಿವಾಹಿತ ಮಹಿಳೆಯರು ಗರ್ಭ ನಿರೋಧಕ ಕ್ರಮಗಳ ಮೂಲಕ ಗರ್ಭಿಣಿಯರಾಗುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ತಾವು ಬಾಲಕಿಯರ ಶಿಕ್ಷಣವನ್ನು ಸುಧಾರಿಸಲು ಜಾರಿಗೆ ತಂದ ನೀತಿಗಳ ನೆರವಿನಿಂದಲೂ ಜನಸಂಖ್ಯೆ ನಿಯಂತ್ರಣವಾಗಿದೆ ಎಂದು ಸದನಕ್ಕೆ ತಿಳಿಸಿದ್ದರು. ಆದರೆ, ಅವರ ಮಾತುಗಳು ಮೂರ್ಖತನದ್ದು ಎಂದು ರಾಷ್ಟ್ರೀಯ ಮಹಿಳಾ ಆಯೋಗವು ತರಾಟೆಗೆ ತೆಗೆದುಕೊಂಡಿತ್ತು.

ಈ ಕುರಿತು ಬುಧವಾರ ಸ್ಪಷ್ಟೀಕರಣ ನೀಡಿರುವ ನಿತೀಶ್ ಕುಮಾರ್, “ಫಲವಂತಿಕೆ ದರ ಹಾಗೂ ಜನಸಂಖ್ಯೆ ನಿಯಂತ್ರಣವನ್ನು ತಗ್ಗಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರ ವಹಿಸಿದೆ ಎಂಬುದು ನನಗೆ ಅರ್ಥವಾದ ನಂತರವೇ ಈ ಕುರಿತು ಪ್ರಾಮಾಣಿಕವಾಗಿ ಹೇಳಿಕೆ ನೀಡಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

“10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ದಂಪತಿಗಳ ಫಲವಂತಿಕೆ ಪ್ರಮಾಣವು ಬಿಹಾರದಲ್ಲಿ ಶೇ. 2ರಷ್ಟಿರುವುದು ನಮಗೆ ಕಂಡು ಬಂದಿದೆ” ಎಂದು ಸುದ್ದಿಗಾರರಿಗೆ ತಿಳಿಸಿದ ನಿತೀಶ್ ಕುಮಾರ್, “10ನೇ ತರಗತಿಯ ನಂತರವೂ ತಮ್ಮ ವ್ಯಾಸಂಗ ಮುಂದುವರಿಸಿದ ವಿವಾಹಿತ ಮಹಿಳೆಯರ ರಾಷ್ಟ್ರೀಯ ಫಲವಂತಿಕೆ ದರವು ಶೇ. 1.7ಕ್ಕೆ ಕುಸಿದಿದ್ದರೆ, ಬಿಹಾರದಲ್ಲಿ ಈ ಪ್ರಮಾಣವು ಶೇ. 1.6ರಷ್ಟಿದೆ. ಇದನ್ನು ತಿಳಿದು ನಾನು ರೋಮಾಂಚಿತಗೊಂಡಿದ್ದೇನೆ. ನಾವು ಮಹಿಳೆಯರ ಶಿಕ್ಷಣಕ್ಕಾಗಿ ದುಡಿದಿದ್ದು ಹಾಗೂ ಅದಕ್ಕಾಗಿ ಬಜೆಟ್ ಅನ್ನು ನಿಗದಿಗೊಳಿಸಿದ್ದು ನಿಮಗೆಲ್ಲ ತಿಳಿದೇ ಇದೆ” ಎಂದು ಹೇಳಿದ್ದಾರೆ.

ಆದರೆ, ಜನಸಂಖ್ಯೆಯನ್ನು ತಗ್ಗಿಸಲು ಶಿಕ್ಷಣ ಕೂಡಾ ನೆರವು ನೀಡುವುದರಿಂದ ನಾನು ಶಿಕ್ಷಣವನ್ನು ಪ್ರೋತ್ಸಾಹಿಸಲು ಮಾತ್ರ ಪ್ರಯತ್ನಿಸಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಆದರೆ, ರಾತ್ರಿ ವೇಳೆ ದಂಪತಿಗಳು ಒಟ್ಟಾಗಿ ನಿದ್ರಿಸುವ ಕುರಿತ ನನ್ನ ಹೇಳಿಕೆಯ ಕುರಿತು ಟೀಕೆಗಳಿದ್ದರೆ, ಆ ಕುರಿತು ನಾನು ಕ್ಷಮೆ ಕೋರುತ್ತೇನೆ” ಎಂದು ನಿತೀಶ್ ಕುಮಾರ್ ಹೇಳಿದರು. “ಒಂದು ವೇಳೆ ನಾನು ಹಾಗೆ ಹೇಳಿರುವುದು ತಪ್ಪಾದರೆ ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ ಹಾಗೂ ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ” ಎಂದು ತಿಳಿಸಿದರು.

ಇದಕ್ಕೂ ಮುನ್ನ, ಮಂಗಳವಾರ ನಿತೀಶ್ ಕುಮಾರ್ ಮಾಡಿದ್ದ ಭಾಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಈ ಹೇಳಿಕೆಯು ಮಹಿಳೆಯರೆಡೆಗಿನ ಅಸೂಕ್ಷ್ಮತೆಯನ್ನು ಪ್ರದರ್ಶಿಸುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ತರಾಟೆಗೆ ತೆಗೆದುಕೊಂಡಿತ್ತು.

“ಪ್ರಜಾತಂತ್ರದಲ್ಲಿ ನಾಯಕನೊಬ್ಬ ಹೀಗೆ ಬಹಿರಂಗ ಹೇಳಿಕೆ ನೀಡುವುದಾದರೆ, ಅಂಥ ನಾಯಕನ ನಾಯಕತ್ವದಲ್ಲಿನ ರಾಜ್ಯವೊಂದು ಎಂಥ ಭಯಾನಕ ಸ್ಥಿತಿಯನ್ನು ಅನುಭವಿಸುತ್ತಿದೆ ಎಂದು ಯಾರೂ ಬೇಕಾದರೂ ಊಹಿಸಬಹುದು” ಎಂದು ಕಿಡಿ ಕಾರಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ, “ನಾವು ಇಂತಹ ವರ್ತನೆಯ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಹಾಗೂ ಹೊಣೆಗಾರಿಕೆಗಾಗಿ ಆಗ್ರಹಿಸುತ್ತೇವೆ” ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News