ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಆಗ್ರಹ ತೀವ್ರಗೊಳಿಸಿದ ನಿತೀಶ್ ಕುಮಾರ್
ಪಾಟ್ನಾ: ವಿತ್ತ ವರ್ಷ 2024-25ರ ಕೇಂದ್ರ ಬಜೆಟ್‌ಗೆ ಕೆಲವೇ ದಿನಗಳು ಇವೆ. ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ತನ್ನ ಬೇಡಿಕೆಯನ್ನು ತೀವ್ರಗೊಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕೂಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ. ಬಿಹಾರದ ಬೆಳವಣಿಗೆ ಗತಿಯನ್ನು ತ್ವರಿತಗೊಳಿಸುವ ದಾರಿಯನ್ನು ಕಂಡುಕೊಳ್ಳಲು ಸೀತಾರಾಮನ್ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.
ಬಜೆಟ್ ಪೂರ್ವ ಸಭೆಯಲ್ಲಿ ಸೀತಾರಾಮನ್ ಹಾಗೂ ಚೌಧರಿ ಅವರು ಬಿಹಾರದ ತ್ವರಿತ ಬೆಳವಣಿಗೆಗೆ ನಿಧಿ ಒದಗಿಸುವಂತಹ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಇನ್ನೊಂದೆಡೆ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ವಿಜಯ್ ಕುಮಾರ್ ಸಿನ್ಹಾ, ಬಿಹಾರದ ತ್ವರಿತ ಬೆಳವಣಿಗೆಗೆ ಕೇಂದ್ರ ಸರಕಾರ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರತಿಪಾದಿಸಿದ್ದಾರೆ.
‘‘ಅಭಿವೃದ್ಧಿ ವಿಷಯದ ಕುರಿತಂತೆ ಕೇಂದ್ರದಿಂದ ಸಂಪೂರ್ಣ ಬೆಂಬಲ ಪಡೆಯುವ ಬಗ್ಗೆ ನಾವು ಭರವಸೆ ಹೊಂದಿದ್ದೇವೆ’’ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರದ ಸ್ಥಿರತೆಗೆ ಜೆಡಿ(ಯು) ಬೆಂಬಲ ತುಂಬಾ ಮುಖ್ಯವಾಗಿದೆ ಹಾಗೂ ಜೆಡಿಯು ಕೇಂದ್ರ ಸರಕಾರದಿಂದ ಗರಿಷ್ಠ ಹಣಕಾಸು ಪ್ಯಾಕೇಜ್ ಪಡೆಯುವ ಸಾಧ್ಯತೆ ಇದೆ.